ಮುಂಬೈ : 15ನೇ ಆವೃತ್ತಿಯ ಐಪಿಎಲ್‌ನ ಡೆಲ್ಲಿ ವಿರುದ್ಧದ ಮೊದಲ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್ ಮಾಡಿದ ಹಿನ್ನೆಲೆಯಲ್ಲಿ ಮುಂಬೈ ತಂಡದ ನಾಯಕ ರೋಹಿತ್ ಶರ್ಮಾಗೆ 12 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಬ್ರಬೋರ್ನ್ ಕ್ರೀಡಾಂಗಣದಲ್ಲಿ ಡಿಸಿ ವಿರುದ್ಧದ ನಿನ್ನೆಯ ಪಂದ್ಯದಲ್ಲಿ ಮುಂಬೈ ಇಂಡಿನಯ್ಸ್ 4 ವಿಕೆಟ್‌ಗಳಿಂದ ಸೋಲುಂಡಿತ್ತು.
ಐಪಿಎಲ್ ನೀತಿ ಸಂಹಿತೆಯ ಅಡಿಯಲ್ಲಿ ಕನಿಷ್ಠ ಓವರ್ ರೇಟ್ ಅಪರಾಧಗಳಿಗೆ ಸಂಬಂಧಿಸಿದಂತೆ ಆವೃತ್ತಿಯ ಮೊದಲ ಅಪರಾಧ ಇದಾಗಿದೆ ಎಂದು ಐಪಿಎಲ್ ಆಡಳಿತ ಮಂಡಳಿ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದೆ. ಅಕ್ಷರ್ ಪಟೇಲ್ ಮತ್ತು ಲಲಿತ್ ಯಾದವ್ ಅವರು ಕೊನೆಯಲ್ಲಿ ಅಬ್ಬರಿಸಿದ ಫಲವಾಗಿ ಡೆಲ್ಲಿ ಕ್ಯಾಪಿಟಲ್ಸ್ ಆರಂಭಿಕ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಅನ್ನು ನಾಲ್ಕು ವಿಕೆಟ್‌ಗಳಿಂದ ಸೋಲಿಸಿತು.
ಪಟೇಲ್ ಮತ್ತು ಲಲಿತ್ ಯಾದವ್ ಕೇವಲ 30 ಎಸೆತಗಳಲ್ಲಿ 70 ರನ್‌ಗಳ ಜೊತೆಯಾಟದಿಂದಾಗಿ ಡೆಲ್ಲಿ 18.2 ಓವರ್‌ಗಳಲ್ಲಿ 177 ರನ್ ಗಳಿಸಿತು. ಪಂದ್ಯದ ನಂತರ ಮಾತನಾಡಿದ ರೋಹಿತ್ ಶರ್ಮಾ, ಇದು ಉತ್ತಮ ಸ್ಕೋರ್ ಎಂದು ನಾನು ಭಾವಿಸಿದ್ದೆ. ಆರಂಭದಲ್ಲಿ 170 ಪ್ಲಸ್ ಗಳಿಸುವ ಪಿಚ್‌ನಂತೆ ಕಾಣಲಿಲ್ಲ.
ನಮ್ಮ ಯೋಜನೆಯಂತೆ ಬೌಲಿಂಗ್ ಮಾಡಲು ಸಾಧ್ಯವಾಗಿಲ್ಲ. ಮೊದಲ ಪಂದ್ಯವಾಗಲಿ ಅಥವಾ ಕೊನೆಯ ಪಂದ್ಯವಾಗಲಿ ಕಠಿಣ ಪ್ರಯತ್ನ ಮಾಡಲು ನಾವು ಯಾವಾಗಲೂ ಸಿದ್ಧರಿದ್ದೇವೆ, ನಾವು ಪ್ರತಿ ಪಂದ್ಯವನ್ನು ಗೆಲ್ಲಲು ಬಯಸುತ್ತೇವೆ ಎಂದು ಹೇಳಿದರು. ಟಾಸ್ ಸೋತು ಬ್ಯಾಟಿಂಗ್ ಮಾಡಿದ್ದ ಮುಂಬೈ ಇಂಡಿಯನ್ಸ್ ನಿಗದಿತ 20 ಓವರ್‌ಗಳಿಗೆ 5 ವಿಕೆಟ್ ಕಳೆದುಕೊಂಡು 177 ರನ್ ಗಳಿಸಿತ್ತು.