ಮುಂಬೈ: ಶುಕ್ರವಾರ ರಾಜಸ್ಥಾನ್ ರಾಯಲ್ಸ್ ವಿರುದ್ಧ ಐಪಿಎಲ್ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಕ್ಕಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್‌ಗೆ ಪಂದ್ಯದ ಸಂಭಾವನೆಯ ಶೇ.100ರಷ್ಟು ದಂಡ ವಿಧಿಸಲಾಗಿದೆ. ಸಹಆಟಗಾರ ಶಾರ್ದೂಲ್ ಠಾಕೂರ್ಗೆ ಶೇ.50ರಷ್ಟು ದಂಡ ಮತ್ತು ಸಹಾಯಕ ಕೋಚ್ ಪ್ರವೀಣ್ ಆಮ್ರೆಗೆ ಒಂದು ಪಂದ್ಯ ನಿಷೇಧ ಮಾಡಲಾಗಿದೆ.
15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನ 34ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ನಡುವೆ ಮುಂಬೈನ ವಾಂಖೆಡೆ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಿದ್ದವು. ಮೊದಲು ಬ್ಯಾಟಿಂಗ್ ಮಾಡಿದ್ದ ರಾಜಸ್ಥಾನ್ ರಾಯಲ್ಸ್ 222 ರನ್ಗಳಿಸಿದರೆ, ಇದಕ್ಕುತ್ತರವಾಗಿ ಡೆಲ್ಲಿ 207ರನ್ಗಳಿಸಿ 15 ರನ್ಗಳ ರೋಚಕ ಸೋಲು ಕಂಡಿತ್ತು.
ಅಂತಿಮ ಓವರ್ ನೋಬಾಲ್ ಡ್ರಾಮ: ನಿನ್ನೆ ನಡೆದ ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ರನ್ ಚೇಸಿಂಗ್ ಮಾಡುತ್ತಿದ್ದ ಡೆಲ್ಲಿಗೆ ಅಂತಿಮ ಓವರ್ನಲ್ಲಿ ಗೆಲ್ಲಲು 36 ರನ್ಗಳ ಅಗತ್ಯವಿತ್ತು. ಡೆಲ್ಲಿ ತಂಡದ ಸ್ಪೋಟಕ ಆಟಗಾರ ರೋವ್‌ಮನ್ ಪೊವೆಲ್ ಕ್ರೀಸ್‌ನಲ್ಲಿದ್ದರು. ರಾಜಸ್ಥಾನ್ ರಾಯಲ್ಸ್ ತಂಡದ ಬೌಲರ್ ಒಬೆಡ್ ಮೆಕ್‌ಕಾಯ್ ಅಂತಿಮ ಓವರ್ ಬೌಲಿಂಗ್ ಮಾಡುತ್ತಿದ್ದರು. ಈ ಓವರ್‌ನ ಮೊದಲ 3 ಎಸೆತಗಳನ್ನು ಪೊವೆಲ್ ಸಿಕ್ಸರ್‌ಗಟ್ಟಿದರು. ಮೂರನೇ ಎಸೆತ ಫುಲ್ಟಾಸ್ ಆಗಿದ್ದು, ಪೊವೆಲ್ ನೋ ಬಾಲ್ ಎಂದು ಪ್ರಶ್ನಿಸಿದರು.
ಆದರೆ, ಮೈದಾನದ ಅಂಪೈರ್ ನಿತಿನ್ ಮೆನನ್ ಇದನ್ನು ತಿರಸ್ಕರಿಸಿದರು. ಇದು ಡೆಲ್ಲಿ ಕ್ಯಾಪಿಟಲ್ಸ್ ಕ್ಯಾಂಪ್ನಲ್ಲಿದ್ದ ಆಟಗಾರರನ್ನು ಕೆರಳಿಸಿತು. ಪೊವೆಲ್ ಕೂಡ ಬ್ಯಾಟ್ ಮಾಡದೆ ನಿಂತರೆ, ಪಂತ್ ಇಬ್ಬರನ್ನು ಮೈದಾನದಿಂದ ವಾಪಸ್ ಬರುವಂತೆ ಕರೆದರು. ಆದರೆ ಬ್ಯಾಟರ್ಗಳನ್ನು ತಡೆದು ಮುಂದುವರಿಸಲು ಹೇಳಿದರು. ಕೋಚ್ ಪ್ರವೀಣ್ ಆಮ್ರೆ ಮೈದಾನ ಪ್ರವೇಶಿಸಿ ಅಂಪೈರ್ಗೆ ಅದು ನೋಬಾಲ್ ಏಕಿಲ್ಲ ಎಂದು ಪ್ರಶ್ನಿಸಿದರಾದರೂ, ಡೆಲ್ಲಿ ಪಾಳಯದ ಹೋರಾಟಕ್ಕೆ ಮನ್ನಣೆ ಸಿಗಲಿಲ್ಲ. ಕೊನೆಯ 3 ಎಸೆತಗಳಲ್ಲಿ ಕೇವಲ 3 ರನ್ಗಳಿಸಲಷ್ಟೇ ಶಕ್ತವಾಯಿತು.
ನೋಬಾಲ್ ನೀಡದ ಕಾರಣಕ್ಕೆ ಆಕ್ರೋಶವ್ಯಕ್ತಪಡಿಸಿ ಮೈದಾನದಲ್ಲಿದ್ದ ಆಟಗಾರರನ್ನು ವಾಪಸ್ ಕರೆದಿದ್ದಕ್ಕೆ ತಂಡದ ನಾಯಕ ರಿಷಭ್ ಪಂತ್‌ಗೆ ಪಂದ್ಯದ ಶೇಕಡಾ 100ರಷ್ಟು ದಂಡ ಮತ್ತು ಮತ್ತೋರ್ವ ಆಟಗಾರ ಶಾರ್ದೂಲ್ ಠಾಕೂರ್‌ಗೂ ಸಹ ಶೇಕಡಾ 50ರಷ್ಟು ದಂಡ ಮತ್ತು ಮೈದಾನಕ್ಕೆ ಪ್ರವೇಶಿಸಿದ ಸಹಾಯಕ ಕೋಚ್ ಪ್ರವೀಣ್ ಆಮ್ರೆಗೆ ಐಪಿಎಲ್ ನೀತಿ ಸಂಹಿತೆ 2.2ರ ಅಡಿಯಲ್ಲಿ ಶೇ 100ರಷ್ಟು ದಂಡ ವಿಧಿಸುವುದರ ಜೊತೆಗೆ ಮುಂದಿನ ಒಂದು ಪಂದ್ಯದಿಂದ ಬ್ಯಾನ್ ಮಾಡಲಾಗಿದೆ.
ಈ ಮೂವರು ತಮ್ಮ ತಪ್ಪುಗಳನ್ನು ಒಪ್ಪಿಕೊಂಡು ದಂಡ ಕಟ್ಟಲು ಒಪ್ಪಿಕೊಂಡಿದ್ದಾರೆ ಎಂದು ಐಪಿಎಲ್ ಹೇಳಿಕೆ ಬಿಡುಗಡೆ ಮಾಡಿದೆ.
ಇದನ್ನೂ ಓದಿ:ಡೆಲ್ಲಿ ವಿರುದ್ಧ ಗೆದ್ದ ರಾಜಸ್ಥಾನ... ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಮರಳಿದ ಸ್ಯಾಮ್ಸನ್ ಬಳಗ