ಮುಂಬೈ: ಭಾರತ ಮತ್ತು ಆರ್ಸಿಬಿ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರು ಮಾನಸಿಕವಾಗಿ ತುಂಬಾ ದಣಿದಿದ್ದಾರೆ. ಅವರು ಇನ್ನೂ ಆರೇಳು ವರ್ಷ ಕ್ರಿಕೆಟ್ ಆಡಬೇಕಾದರೆ ಸದ್ಯಕ್ಕೆ ಒಂದು ವಿರಾಮ ಅಗತ್ಯವಿದೆ ಎಂದು ಟೀಂ ಇಂಡಿಯಾ ಮಾಜಿ ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ.
ವಿರಾಟ್ ಕೊಹ್ಲಿ ಕೆಲವು ತಿಂಗಳ ಹಿಂದೆ ಎಲ್ಲಾ ಮಾದರಿಯ ನಾಯಕತ್ವದಿಂದ ಕೆಳಗಿಳಿದಿದ್ದಾರೆ. ಅವರು 2019 ನವೆಂಬರ್ ಅವರು ಯಾವುದೇ ಮಾದರಿಯಲ್ಲಿ ಶತಕ ಸಿಡಿಸಿಲ್ಲ. ಪ್ರಸ್ತುತ ಅವರು ವೃತ್ತಿಜೀವನದ ಅತ್ಯಂತ ಕೆಳಸ್ತರದಲ್ಲಿ ಕಾಣಿಸಿಕೊಂಡಿದ್ದಾರೆ. 2022ರ ಐಪಿಎಲ್ನಲ್ಲಿ ನಿರಂತರವಾಗಿ ಕಳಪೆ ಮೊತ್ತಕ್ಕೆ ವಿಕೆಟ್ ನೀಡುತ್ತಿದ್ದು, 7 ಪಂದ್ಯಗಳಿಂದ 19.83ರ ಸರಾಸರಿಯಲ್ಲಿ ಕೇವಲ 119ರನ್ಗಳಿಸಿದ್ದಾರೆ.
ಪ್ರಸ್ತುತ ಪರಿಸ್ಥಿತಿಯಲ್ಲಿ ವಿರಾಟ್ ಕೊಹ್ಲಿಗೆ ಒಂದು ಬ್ರೇಕ್ ಬೇಕಿದೆ. ಅವರು ತಮ್ಮ ತಲೆಯಲ್ಲಿರುವ ಗೊಂದಲಗಳನ್ನು ಸಂಪೂರ್ಣವಾಗಿ ತೊಡೆದು ಹಾಕುವುದಕ್ಕೆ ಏನು ಮಾಡಬೇಕು ಎಂಬುದನ್ನು ನಿರ್ಧರಿಸುವ ಅಗತ್ಯವಿದೆ ಎಂದು ರವಿಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.
"ವಿರಾಟ್ ಕೊಹ್ಲಿ ತುಂಬಾ ದಣಿದಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಯಾರಿಗಾದರೂ ವಿರಾಮದ ಅಗತ್ಯವಿದೆ ಎಂದಾದರೆ, ಅದು ವಿರಾಟ್ ಕೊಹ್ಲಿಗೆ ಮಾತ್ರ" ಎಂದು ಲಖನೌ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಗೋಲ್ಡನ್ ಡಕ್ಔಟ್ ಆದ ನಂತರ ರವಿಶಾಸ್ತ್ರಿ ತಿಳಿಸಿದ್ದನ್ನು ಐಸಿಸಿ ತನ್ನ ವೆಬ್ಸೈಟ್ನಲ್ಲಿ ಉಲ್ಲೇಖಿಸಿದೆ.
ಇಂಗ್ಲೆಂಡ್ ಪ್ರವಾಸಕ್ಕೆ ಇನ್ನು 3 ತಿಂಗಳು ಸಮಯವಿದ್ದು, ಕೊಹ್ಲಿ ಕ್ರಿಕೆಟ್ನಲ್ಲಿ ದೀರ್ಘಸಮಯ ಮುಂದುವರಿಯಬೇಕಾದರೆ, ಒಂದು ಬ್ರೇಕ್ನ ಅಗತ್ಯವಿದೆ. ಅದು 2 ತಿಂಗಳು ಅಥವಾ ಒಂದುವರೆ ತಿಂಗಳಾಗಲಿ ವಿಶ್ರಾಂತಿ ತೆಗೆದುಕೊಳ್ಳಬೇಕು. ಅದು ಇಂಗ್ಲೆಂಡ್ ಪ್ರವಾಸದ ನಂತರವಾಗಲಿ ಅಥವಾ ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನವಾಗಲಿ, ಖಂಡಿತ ಅವರಿಗೆ ಒಂದು ಬ್ರೇಕ್ ಅಗತ್ಯವಿದೆ. ಏಕೆಂದರೆ ಅವರಲ್ಲಿ ಆರೇಳು ವರ್ಷಗಳ ಕ್ರಿಕೆಟ್ ಇದೆ ಮತ್ತು ಅದನ್ನು ಅವರು ದಣಿದಿರುವ ಮನಸ್ಸಿನಲ್ಲಿ ಆಡಿ ವ್ಯರ್ಥಮಾಡಿಕೊಳ್ಳಬಾರದು ಎಂದು ಶಾಸ್ತ್ರಿ ತಿಳಿಸಿದ್ದಾರೆ.
ವಿರಾಟ್ ಕೊಹ್ಲಿ ವೈಫಲ್ಯದ ಹೊರತಾಗಿಯೂ ಆರ್ಸಿಬಿ 2022ರ ಐಪಿಎಲ್ನಲ್ಲಿ ಅತ್ಯುತ್ತಮ ಪ್ರದರ್ಶನ ತೋರುತ್ತಿದೆ. ಆಡಿರುವ 7 ಪಂದ್ಯಗಳಲ್ಲಿ 2 ಸೋಲು 5 ಗೆಲುವುಗಳೊಂದಿಗೆ 2ನೇ ಸ್ಥಾನದಲ್ಲಿದೆ. ಇನ್ನು 7 ಲೀಗ್ ಪಂದ್ಯಗಳಿದ್ದು, ಕೊಹ್ಲಿ ಯಾವ ರೀತಿ ಪ್ರದರ್ಶನ ನೀಡಲಿದ್ದಾರೆ ನೋಡಬೇಕಿದೆ.
ಇದನ್ನೂ ಓದಿ:ಡುಪ್ಲೆಸಿಸ್ ಕೆಚ್ಚೆದೆಯ ಬ್ಯಾಟಿಂಗ್, ಬೌಲರ್ಗಳ ಮಿಂಚು: ಲಖನೌ ವಿರುದ್ಧ ಗೆದ್ದ ರಾಯಲ್ ಚಾಲೆಂಜರ್ಸ್