ಮುಂಬೈ: ಲಿಯಾಮ್ ಲಿವಿಂಗ್‌ಸ್ಟೋನ್ ಆಕರ್ಷಕ ಆಲ್‌ರೌಂಡ್ ಪ್ರದರ್ಶನದ ಫಲವಾಗಿ ಪಂಜಾಬ್ ಕಿಂಗ್ಸ್ ತಂಡವು ಚೆನ್ನೈ ಸೂಪರ್ ವಿರುದ್ಧ ಅಮೋಘ ಜಯ ದಾಖಲಿಸಿತು.
ಇಲ್ಲಿನ ಬ್ರಬೋರ್ನ್ ಕ್ರೀಡಾಂಗಣದಲ್ಲಿ ಐಪಿಎಲ್ ಟೂರ್ನಿಯ ಭಾನುವಾರದ ಪಂದ್ಯದಲ್ಲಿ ರವೀಂದ್ರ ಜಡೇಜಾ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಹಾಗು ಮಯಾಂಕ್ ಅಗರ್‌ವಾಲ್ ನೇತೃತ್ವದ ಪಂಜಾಬ್ ಕಿಂಗ್ಸ್ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಪಂಜಾಬ್ ತಂಡ ಚೆನ್ನೈಗೆ 54 ರನ್‌ಗಳ ಸೋಲುಣಿಸಿತು.
ಟಾಸ್ ಗೆದ್ದ ಚೆನ್ನೈ ತಂಡ ಪಂಜಾಬ್ ಕಿಂಗ್ಸ್ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು. ತಂಡ ಆರಂಭದಲ್ಲಿ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದರೂ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಲಿಯಾಮ್ ಲಿವಿಂಗ್‌ಸ್ಟೋನ್ ತಾವು ಎದುರಿಸಿದ 32 ಎಸೆತಗಳಲ್ಲಿ 60 ರನ್ ಕಲೆ ಹಾಕಿ ತಂಡವನ್ನು ಸುಸ್ಥಿತಿಗೆ ತಂದರು. ಇದರ ಜೊತೆಗೆ, ಶಿಖರ್ ಧವನ್ (33), ಜಿತೇಶ್ ಶರ್ಮಾ (26) ರನ್ ಫಲವಾಗಿ ಪಂಜಾಬ್ 8 ವಿಕೆಟ್ ನಷ್ಟಕ್ಕೆ 180 ಕಲೆ ಹಾಕಿತು.
ಪಂಜಾಬ್ ತಂಡವು ಬೌಲಿಂಗ್ ವಿಭಾಗದಲ್ಲೂ ಕರಾರುವಾಕ್ ಪ್ರದರ್ಶನ ತೋರಿದ್ದು, ರಾಹುಲ್ ಚಹಾರ್ 3 ವಿಕೆಟ್ ಕಬಳಿಸಿದರೆ, ವೈಭವ್ ಅರೋರಾ, ಲಿವಿಂಗ್‌ಸ್ಟೋನ್ ತಲಾ 2 ವಿಕೆಟ್ ಕಿತ್ತರು. ಇನ್ನುಳಿದಂತೆ, ರಬಾಡಾ, ಅರ್ಷದೀಪ್ ಸಿಂಗ್, ಒಡಿಯನ್ ಸ್ಮಿತ್ ತಲಾ ಒಂದೊಂದು ವಿಕೆಟ್ ಪಡೆದರು.
ಇದಕ್ಕುತ್ತರವಾಗಿ, ಬ್ಯಾಟಿಂಗ್ ಮಾಡಿದ ಚೆನ್ನೈ ತಂಡ, ಶಿವಂ ದುಬೆ ಅವರ ಆಕರ್ಷಕ 30 ಎಸೆತಗಳಲ್ಲಿ 67 ರನ್ ಹಾಗು ಧೋನಿ 23 ರನ್‌ಗಳನ್ನು ಬಿಟ್ಟರೆ ಬೇರಾವ ಆಟಗಾರನ ಬ್ಯಾಟ್‌ನಿಂದಲೂ ರನ್ ಹರಿದುಬರಲಿಲ್ಲ. ಚೆನ್ನೈ ಬೌಲರ್‌ಗಳಾದ ಕ್ರಿಸ್ ಜೋರ್ಡನ್, ಡ್ವೇನ್ ಪ್ರಿಟೋರಿಯಸ್ ತಲಾ 2 ವಿಕೆಟ್, ಮುಖೇಶ್ ಚೌಧರಿ, ರವೀಂದ್ರ ಜಡೇಜಾ, ಅರ್ಶ್‌ದೀಪ್ ಸಿಂಗ್ ತಲಾ ಒಂದು ವಿಕೆಟ್ ಉರುಳಿಸಿದರು.
ಚೆನ್ನೈಗೆ ಸತತ 3ನೇ ಸೋಲು: ಪಂಜಾಬ್ ಎದುರಿನ ಸೋಲಿನ ಮೂಲಕ ರವೀಂದ್ರ ಜಡೇಜಾ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಟೂರ್ನಿಯಲ್ಲಿ ಸತತ ಮೂರನೇ ಸೋಲು ಕಂಡಿತು. ಈ ಬಗ್ಗೆ ಮಾತನಾಡಿರುವ ಜಡೇಜಾ, 'ನಾವು ಪವರ್ ಪ್ಲೇಯಲ್ಲಿ ಸಾಕಷ್ಟು ವಿಕೆಟ್‌ಗಳನ್ನು ಕಳೆದುಕೊಂಡೆವು. ಪಂದ್ಯದ ಮೊದಲ ಎಸೆತದಿಂದಲೂ ಸೂಕ್ತ ಲಯದಲ್ಲಿ ಸಾಗಲು ಸಾಧ್ಯವಾಗಲಿಲ್ಲ. ಮುಂದಿನ ಪಂದ್ಯಗಳಲ್ಲಿ ಶಕ್ತಿಯುತವಾಗಿ ಹೊರ ಹೊಮ್ಮಲು ನಾವು ದಾರಿಗಳನ್ನು ಹುಡುಕಬೇಕಿದೆ' ಎಂದರು.
ಇದೇ ವೇಳೆ, ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿರುವ ರುತುರಾಜ್ ಗಾಯಕ್ವಾಡ್ ಅವರನ್ನು ಸಮರ್ಥಿಸಿಕೊಂಡರು. 'ನಾವು ಆತನಿಗೆ ಆತ್ಮವಿಶ್ವಾಸವನ್ನು ತುಂಬಬೇಕಿದೆ. ಆತ ಅತ್ಯುತ್ತಮ ಬ್ಯಾಟರ್ ಅನ್ನೋದು ಎಲ್ಲರಿಗೂ ಗೊತ್ತು. ಆತ ಮುಂದಿನ ಪಂದ್ಯಗಳಲ್ಲಿ ಉತ್ತಮ ಲಯಕ್ಕೆ ಮರಳುವ ವಿಶ್ವಾಸವಿದೆ' ಎಂದರು. ಇದೇ ವೇಳೆ ಶಿವಂ ದುಬೆ ಆಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಇದನ್ನೂ ಓದಿ: ಲಿಯಾಮ್ ಲಿವಿಂಗ್‌ಸ್ಟೋನ್ ಅರ್ಧ ಶತಕ.. ಚೆನ್ನೈಗೆ 180 ರನ್ ಗುರಿ