ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ 15ನೇ ಆವೃತ್ತಿಯು ಅಂತಿಮ ಹಂತದತ್ತ ತಲುಪಿದ್ದು, ಇನ್ನೊಂದು ವಾರದಲ್ಲಿ ತೆರೆ ಬೀಳಲಿದೆ. ಭಾನುವಾರ(ಇಂದು) ಲೀಗ್ ಹಂತದ ಕೊನೆಯ ಅಂದರೆ 70ನೇ ಪಂದ್ಯ ನಡೆಯಲಿದ್ದು, ಬಳಿಕ ಪ್ಲೇ ಆಫ್ನತ್ತ ಎಲ್ಲರ ದೃಷ್ಟಿ ನೆಟ್ಟಿದೆ. ಪ್ಲೇ ಆಫ್ ಪಂದ್ಯಗಳು, ಮೈದಾನ ಹಾಗೂ ಆಡುವ ತಂಡಗಳೂ ಕೂಡ ಪಕ್ಕಾ ಆಗಿವೆ. ಈ ಪಂದ್ಯಗಳಿಗೆ ಮೈದಾನದಲ್ಲಿ ಶೇ. 100ರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡಲಾಗಿದೆ.
ಶನಿವಾರ ನಡೆದ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯದ ಬಳಿಕ ಪ್ಲೇ ಆಫ್ ಹಂತಕ್ಕೆ ಸ್ಪಷ್ಟಚಿತ್ರಣ ದೊರೆತಿದೆ. ಈ ಪಂದ್ಯದಲ್ಲಿ ಡೆಲ್ಲಿ ಸೋತು ಟೂರ್ನಿಯಿಂದ ಹೊರಬಿದ್ದರೆ, ಆರ್ಸಿಬಿ 4ನೇ ತಂಡವಾಗಿ ಮುಂದಿನ ಹಂತಕ್ಕೆ ಲಗ್ಗೆ ಹಾಕಿದೆ. ಪ್ಲೇ ಆಫ್ ಪಂದ್ಯಗಳು ಎಲ್ಲಿ, ಯಾವಾಗ ಹಾಗೂ ಯಾವ ತಂಡಗಳ ನಡುವೆ ನಡೆಯಲಿವೆ ಎಂಬ ಮಾಹಿತಿ ಇಲ್ಲಿದೆ.
ಈ ಹಂತದಲ್ಲಿ ಮೂರು ಪಂದ್ಯಗಳು ನಡೆಯಲಿದ್ದು, ಬಳಿಕ ಫೈನಲ್ ಹಣಾಹಣಿಗೆ ಸಜ್ಜಾಗಬೇಕಿದೆ. ಮೇ 24ರಂದು ಮೊದಲ ಕ್ವಾಲಿಫೈಯರ್ ಮತ್ತು ಮೇ 25ರಂದು ಎಲಿಮಿನೇಟರ್ ಪಂದ್ಯವನ್ನು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಸುವುದಾಗಿ ಈಗಾಗಲೇ ಬಿಸಿಸಿಐ ಪ್ರಕಟಿಸಿದೆ. ಮೇ 27ರಂದು ಎರಡನೇ ಕ್ವಾಲಿಫೈಯರ್ ಪಂದ್ಯ ಮತ್ತು ಟೂರ್ನಿಯ ಫೈನಲ್ ಮೇ 29ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಮೈದಾನದಲ್ಲಿ ನಡೆಯಲಿದೆ.
ಮೇ 24ರಂದು ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರ ಎರಡು ಸ್ಥಾನದಲ್ಲಿದ್ದ ಗುಜರಾತ್ ಟೈಟಾನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಮೊದಲ ಕ್ವಾಲಿಫೈಯರ್ನಲ್ಲಿ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಎದುರಾಗಲಿವೆ. ಈ ಪಂದ್ಯದಲ್ಲಿ ಗೆದ್ದ ತಂಡವು ನೇರವಾಗಿ ಫೈನಲ್ಗೆ ಪ್ರವೇಶ ಪಡೆಯಲಿದೆ. ಸೋತ ತಂಡವು 25ರಂದು ಎಲಿಮಿನೇಟರ್ ಪಂದ್ಯದಲ್ಲಿ ಗೆದ್ದ ತಂಡದೊಂದಿಗೆ, ಮೇ 27ರಂದು ಎರಡನೇ ಕ್ವಾಲಿಫೈಯರ್ ಹಣಾಹಣಿಗೆ ಕಣಕ್ಕಿಳಿಯಲಿದೆ.
ಇದನ್ನೂ ಓದಿ: ಐಪಿಎಲ್ ಫೈನಲ್ ಪಂದ್ಯ ಅರ್ಧ ತಾಸು ವಿಳಂಬ.. 8 ಗಂಟೆಗೆ ಆರಂಭಿಸಲು ನಿರ್ಧಾರ
ಮೇ 25ರಂದು ಎಲಿಮಿನೇಟರ್ ನಡೆಯುವ ಎಲಿಮಿನೇಟರ್ ಹೋರಾಟದಲ್ಲಿ ಅಂಕಪಟ್ಟಿಯಲ್ಲಿ ಮೂರು ಹಾಗೂ 4ನೇ ಸ್ಥಾನದಲ್ಲಿರುವ ಲಖನೌ ಸೂಪರ್ ಜೈಂಟ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಆಡಲಿವೆ. ಇಲ್ಲಿ ಜಯ ಸಾಧಿಸಿದ ತಂಡ ಮೇ 27ರಂದು ನಡೆಯುವ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಮೊದಲ ಕ್ವಾಲಿಫೈಯರ್ನಲ್ಲಿ ಸೋಲುಂಡ ಟೀಂನೊಂದಿಗೆ ಫೈನಲ್ ಪ್ರವೇಶಕ್ಕಾಗಿ ಹೋರಾಡಲಿದೆ.
ಈ ಬಾರಿಯ ಐಪಿಎಲ್ನ ವಿಶೇಷವೆಂಬಂತೆ ಎರಡು ಹೊಸ ತಂಡಗಳು ಅದ್ಭುತ ಪ್ರದರ್ಶನದೊಂದಿಗೆ ಪ್ಲೇ ಆಫ್ ಹಂತಕ್ಕೆ ಬಂದಿವೆ. ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್ ಹಾಗೂ ಕೆ.ಎಲ್.ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಪ್ರೇಕ್ಷಕರ ಗಮನ ಸೆಳೆದಿವೆ. ಇನ್ನೊಂದೆಡೆ ಆರ್ಸಿಬಿ 2012ರ ಬಳಿಕ ಮೊದಲ ಸಲ ಹಾಗೂ ರಾಜಸ್ಥಾನ್ ರಾಯಲ್ಸ್ 2018ರ ನಂತರ ಪ್ರಥಮ ಬಾರಿಗೆ ಈ ಹಂತ ತಲುಪಿದೆ.
ಇದನ್ನೂ ಓದಿ: ಡಿಆರ್ಎಸ್ ಪಡೆಯದೆ ಎಡವಿದ ಡೆಲ್ಲಿ: ನಿರ್ಧಾರದ ಹಿಂದಿನ ಕಾರಣ ತಿಳಿಸಿದ ಪಂತ್
ಒಂದು ವೇಳೆ ರಾಜಸ್ಥಾನ್ ರಾಯಲ್ಸ್ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿದರೆ, ಐಪಿಎಲ್ ಇತಿಹಾಸದಲ್ಲಿ ಎರಡನೇ ಬಾರಿಗೆ ಈ ಸಾಧನೆ ಮಾಡಿದಂತಾಗಲಿದೆ. ಬೆಂಗಳೂರು ಸೇರಿದಂತೆ ಇನ್ನುಳಿದ ಮೂರು ತಂಡಗಳಿಗೂ ಕೂಡ ಚೊಚ್ಚಲ ಐಪಿಎಲ್ ಕಿರೀಟ ಪಡೆಯುವ ಅವಕಾಶವಿದೆ. ಮೇ 29ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಮೈದಾನದಲ್ಲಿ ನಡೆಯುವ ಫೈನಲ್ ಹಣಾಹಣಿಯಲ್ಲಿ 2022ರ ಐಪಿಎಲ್ನ ಚಾಂಪಿಯನ್ ಯಾರು ಎಂಬ ಕುತೂಹಲಕ್ಕೆ ತೆರೆ ಬೀಳಲಿದೆ.
- ಐಪಿಎಲ್-2022 ಪ್ಲೇ-ಆಫ್ ವೇಳಾಪಟ್ಟಿ:
- ಮೇ 24 (ಮಂಗಳವಾರ) - ಕ್ವಾಲಿಫೈಯರ್ 1: ಗುಜರಾತ್ ಟೈಟಾನ್ಸ್ VS ರಾಜಸ್ಥಾನ ರಾಯಲ್ಸ್ - ಸಂಜೆ 7:30 ಗಂಟೆಗೆ (ಕೋಲ್ಕತಾ)
- ಮೇ 25 (ಬುಧವಾರ) - ಎಲಿಮಿನೇಟರ್: ಲಕ್ನೋ ಸೂಪರ್ ಜೈಂಟ್ಸ್ VS ರಾಯಲ್ ಚಾಲೆಂಜರ್ಸ್ ಬೆಂಗಳೂರು - ಸಂಜೆ 7:30 ಗಂಟೆಗೆ (ಕೋಲ್ಕತ್ತಾ)
- ಮೇ 27 (ಶುಕ್ರವಾರ) - ಕ್ವಾಲಿಫೈಯರ್ 2: ಕ್ವಾಲಿಫೈಯರ್ 1ರಲ್ಲಿ ಸೋತವರು VS ಎಲಿಮಿನೇಟರ್ ವಿಜೇತರು - ಸಂಜೆ 7:30 ಗಂಟೆಗೆ (ಅಹಮದಾಬಾದ್)
- ಮೇ 29 (ಭಾನುವಾರ) - ಫೈನಲ್ ಪಂದ್ಯ: ಕ್ವಾಲಿಫೈಯರ್ 1 ಗೆದ್ದವರು VS ಕ್ವಾಲಿಫೈಯರ್ 2 ವಿಜೇತರು - ಸಂಜೆ 8 ಗಂಟೆಗೆ (ಅಹಮದಾಬಾದ್)