ಮುಂಬೈ: ಭಾರತ ತಂಡದ ಮಾಜಿ ನಾಯಕ ಗತಕಾಲದಲ್ಲಿ ತಮ್ಮ ಬ್ಯಾಟಿಂಗ್ ಮೂಲಕ ವಿಶ್ವ ಕ್ರಿಕೆಟ್ನಲ್ಲಿ ಸಾಕಷ್ಟು ಹೆಸರು ಗಳಿಸಿಕೊಂಡಿದ್ದಾರೆ. ಆದರೆ ಭಾರತದ ರನ್ ಮಷಿನ್ ಕಳೆದೆರಡು ವರ್ಷಗಳಿಂದ ವೃತ್ತಿ ಜೀವನದ ಅತ್ಯಂತ ಕೆಳಸ್ತರದಲ್ಲಿ ಕಾಣಿಸಿಕೊಂಡಿದ್ದಾರೆ.
ಶನಿವಾರ ನಡೆದ ಹೈದರಾಬಾದ್ ವಿರುದ್ಧ ಮಾರ್ಕೊ ಜಾನ್ಸನ್ ಬೌಲಿಂಗ್ನಲ್ಲಿ ಗೋಲ್ಡನ್ ಡಕ್ ಆಗುವ ಮೂಲಕ ನಿರಾಶೆ ಅನುಭವಿಸಿದ್ದಾರೆ. ಈ ಹಿಂದಿನ ಲಖನೌ ಸೂಪರ್ ಜೈಂಟ್ಸ್ ವಿರುದ್ಧವೂ ಕೂಡ ಗೋಲ್ಡನ್ ಡಕ್ ಆಗಿದ್ದರು. ಈ ರೀತಿ ವಿರಾಟ್ ಸತತ ಗೋಲ್ಡನ್ ಡಕ್ ಆಗಿದ್ದು, ತುಂಬಾ ವಿರಳ. ಭಾರತದ ಮಾಜಿ ನಾಯಕ ಆಡಿರುವ 8 ಪಂದ್ಯಗಳಲ್ಲಿ 119 ರನ್ಗಳಿಸಿದ್ದಾರೆ. ಅವರ ಸರಾಸರಿ ಕೇವಲ 17. ಇದು ಅವರ ಅಭಿಮಾನಿಗಳಿಗೆ ತುಂಬಾ ಆಶ್ಚರ್ಯವನ್ನುಂಟು ಮಾಡಿದೆ. ಆದರೆ ಕೊಹ್ಲಿ ಬೆನ್ನಿಗೆ ನಿಂತಿರುವ ಇಂಗ್ಲೆಂಡ್ ಮಾಜಿ ನಾಯಕ ಕೆವಿನ್ ಪೀಟರ್ಸನ್, ಇಂಡಿಯನ್ ಸ್ಟಾರ್ ಆದಷ್ಟು ಬೇಗ ವಿಜೃಂಭಿಸಲಿದ್ದಾರೆ ಎಂದಿದ್ದಾರೆ.
"ನಿಮಗೊಂದು ಸತ್ಯ ಗೊತ್ತಾಗಬೇಕಾ? ಪ್ರತಿಯೊಬ್ಬ ಶ್ರೇಷ್ಠ ಆಟಗಾರನೂ ವಿರಾಟ್ ಅಂತೆಯೇ ವೈಫಲ್ಯ ಅನುಭವಿಸಿರುತ್ತಾರೆ. ಮತ್ತೊಂದು ನಿಜ ಏನಂದ್ರೆ? ಆ ರೀತಿ ವೈಫಲ್ಯ ಅನುಭವಿಸಿದವರೆಲ್ಲರೂ ಆ ಹಂತವನ್ನು ಮೀರಿ ದೊಡ್ಡ ವೇದಿಕೆಯಲ್ಲಿ ಮಿಂಚುತ್ತಾರೆ " ಎಂದು ಟ್ವೀಟ್ ಮಾಡಿದ್ದಾರೆ. ಟ್ವೀಟ್ ಅಲ್ಲದೆ, ಸ್ಟಾರ್ ಸ್ಫೋರ್ಟ್ಸ್ ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆಯೂ ಸಹಾ ಅವರು ಕೊಹ್ಲಿ ಮತ್ತೆ ಫಾರ್ಮ್ಗೆ ಮರಳುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪ್ರಸ್ತುತ ವಿರಾಟ್ ಕೊಹ್ಲಿ ಯಾವ ಪರಿಸ್ಥಿತಿಯಲ್ಲಿದ್ದಾರೋ, ಹಿಂದೆ ನಾನು ಕೂಡ ಅಂತಹ ಪರಿಸ್ಥಿತಿಯನ್ನು ಎದುರಿಸಿದ್ದೇನೆ. ಇದು ಒಳ್ಳೆಯದಲ್ಲ. ಅವರು ಕತ್ತಲೆಯಲ್ಲಿ ಸಿಲುಕಿದ್ದಾರೆ, ಅದರಲ್ಲೂ ಎಲ್ಲರ ದೃಷ್ಟಿ ಅವರ ಮೇಲಿರುವ ಸಂದರ್ಭದಲ್ಲೇ ಸಿಲುಕಿದ್ದಾರೆ. ಆದರೆ ಅವರು ಇದರಿಂದ ಬೇಗ ಹೊರಬರುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಕೆವಿನ್ ಪೀಟರ್ಸನ್ ಹೇಳಿದ್ದಾರೆ.
ಇದನ್ನೂ ಓದಿ:ಈ ಯುವ ಬೌಲರ್ ಆದಷ್ಟು ಬೇಗ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಲಿದ್ದಾರೆ: ಡೇಲ್ ಸ್ಟೇನ್