ಅಹಮದಾಬಾದ್: ಸತತ 3 ಪಂದ್ಯಗಳ ಸೋಲಿನ ನಂತರ ಕೊನೆಗೂ ಗೆಲುವಿನ ನಗೆ ಬೀರಿರುವ ಪಂಜಾಬ್ ಕಿಂಗ್ಸ್ ಸೋಮವಾರ ಸತತ ಸೋಲುಗಳಿಂದ ಕಂಗೆಟ್ಟಿರುವ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ.
ಪಂಜಾಬ್ ಮೊದಲ ಪಂದ್ಯದ ಜಯದ ನಂತರ ಸತತ 3 ಪಂದ್ಯಗಳಲ್ಲಿ ಸೋಲು ಕಂಡಿತ್ತು. ಆದರೆ, ಶುಕ್ರವಾರ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ 9 ವಿಕೆಟ್ಗಳ ಭರ್ಜರಿ ಜಯ ಸಾಧಿಸುವ ಮೂಲಕ ಗೆಲುವಿನ ಹಳಿಗೆ ಮರಳಿದೆ. ಇದೀಗ ಸತತವಾಗಿ 4 ಪಂದ್ಯಗಳಲ್ಲಿ ಸೋಲು ಕಂಡಿರುವ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಎದುರಿಸಲಿದೆ.
ಅಸಾಧಾರಣವಾಗಿ ಕಾಣುವ ಪಂಜಾಬ್ ಬ್ಯಾಟಿಂಗ್ ಘಟಕದಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರುವವರಲ್ಲಿ ನಾಯಕ ಕೆಎಲ್ ರಾಹುಲ್ ಒಬ್ಬರಾಗಿದ್ದಾರೆ. ಅವರು ಮುಂಬೈ ವಿರುದ್ಧ ಅಜೇಯ 60 ರನ್ಗಳೊಂದಿಗೆ ತಂಡವನ್ನು ಮುಂದೆ ಮುನ್ನಡೆಸಿದ್ದರು. ಅವರು ಅಡಿರುವ 5 ಪಂದ್ಯಗಳಲ್ಲಿ ಇದು ಅವರ ಮೂರನೇ ಅರ್ಧ ಶತಕವಾಗಿದೆ.
ಇನ್ನು ಮಯಾಂಕ್ ಅಗರ್ವಾಲ್ ಮತ್ತು ಕ್ರಿಸ್ ಗೇಲ್ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಆದರೆ, ದೀಪಕ್ ಹೂಡ ಒಂದೇ ಪಂದ್ಯಕ್ಕೆ ಸ್ಥೀಮಿತಗೊಂಡರೆ, ಪೂರನ್ ಇನ್ನು ಎರಡಂಕಿ ಮೊತ್ತವನ್ನೇ ದಾಟಿಲ್ಲ. ಆಡಿರುವ 4 ಪಂದ್ಯಗಳಲ್ಲಿ 3 ಬಾರಿ ಶೂನ್ಯಕ್ಕೆ ಔಟಾಗಿದ್ದರೆ, ಒಂದು ಪಂದ್ಯದಲ್ಲಿ 9 ರನ್ಗಳಿಸಿದ್ದಾರೆ. ಹಾಗಾಗಿ ಇಂದಿನ ಪಂದ್ಯದಲ್ಲಿ ಟಿ -20 ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿರುವ ಡೇವಿಡ್ ಮಲನ್ಗೆ ಅವಕಾಶ ಸಿಗುವ ನಿರೀಕ್ಷೆಯಿದೆ.
ಇನ್ನು ಬೌಲರ್ಗಳಲ್ಲಿ ಅರ್ಶ್ದೀಪ್ ಮತ್ತು ಶಮಿ ಸ್ಥಿರತೆಯುಳ್ಳ ಬೌಲರ್ಗಳಾಗಿದ್ದಾರೆ. ಇನ್ನು ಕಳೆದ ಪಂದ್ಯದಲ್ಲಿ ಅವಕಾಶ ಪಡೆದಿದ್ದ ಯುವ ಸ್ಪಿನ್ನರ್ ರವಿ ಬಿಷ್ಣೋಯ್ ಕೂಡ ಉತ್ತಮ ಪ್ರದರ್ಶನ ತೋರಿರುವುದು ತಂಡಕ್ಕೆ ಬಲ ತಂದಿದೆ.
ಕೆಕೆಆರ್ ಸತತ ನಾಲ್ಕು ಪಂದ್ಯಗಳಲ್ಲೂ ಬ್ಯಾಟಿಂಗ್ ವೈಫಲ್ಯ ಅನುಭವಿಸಿದೆ. ನಿತೀಶ್ ರಾಣಾ 5 ಪಂದ್ಯಗಳಲ್ಲಿ 2 ಅರ್ಧಶತಕ ಸಿಡಿಸಿ ತಂಡದಲ್ಲಿ ಸ್ಥಿರ ಪ್ರದರ್ಶನ ತೋರಿದ್ದಾರೆ. ಆದರೆ ನಾಯಕ ಮಾರ್ಗನ್ ಸೇರಿದಂತೆ ಉಳಿದ ಬ್ಯಾಟ್ಸ್ಮನ್ಗಳು ಸಂಪೂರ್ಣ ವೈಫಲ್ಯ ಅನುಭವಿಸಿದ್ದಾರೆ. ತ್ರಿಪಾಠಿ ಉತ್ತಮ ಆರಂಭ ಪಡೆಯುತ್ತಿದ್ದರಾದರೂ ಅದನ್ನು ದೊಡ್ಡ ಪ್ರಮಾಣದಲ್ಲಿ ಬದಲಾಯಿಸಲು ವಿಫಲರಾಗಿದ್ದಾರೆ.
ಸ್ಟಾರ್ ಬ್ಯಾಟ್ಸ್ಮನ್ಗಳಾದ ಶುಬ್ಮನ್ ಗಿಲ್ ಮತ್ತು ಮಾರ್ಗನ್ ವೈಫಲ್ಯ ತಂಡಕ್ಕೆ ದೊಡ್ಡ ಹೊಡೆತ ನೀಡಿದೆ. ಹಿಂದೆ ಆರಂಭಿಕನಾಗಿ ಕೆಕೆಆರ್ಗೆ ಬಲ ತಂದಿದ್ದ ವಿಂಡೀಸ್ ಆಲ್ರೌಂಡರ್ ಸುನೀಲ್ ನರೈನ್ 4-5 ನೇ ಕ್ರಮಾಂಕ ಹೊಂದಿಕೊಳ್ಳುತ್ತಿಲ್ಲ.
ಇನ್ನು ಬೌಲಿಂಗ್ ವಿಭಾಗದಲ್ಲಿ ರಸೆಲ್ , ಚಕ್ರವರ್ತಿ ಮತ್ತು ಪ್ರಸಿಧ್ ಕೃಷ್ಣ ಕ್ರಮವಾಗಿ 7,6,5 ವಿಕೆಟ್ ಪಡೆದು ಸಮಾಧಾನಕರ ಪ್ರದರ್ಶನ ತೋರುತ್ತಿದ್ದಾರೆ. ಆದರೆ, ದುಬಾರಿ ಆಟಗಾರ ಕಮ್ಮಿನ್ಸ್ 5 ಪಂದ್ಯಗಳಿಂದ 4 ವಿಕೆಟ್ ಪಡೆದಿರುವುದು ಕೆಕೆಆರ್ ಹಿನ್ನಡೆಗೆ ಕಾರಣವಾಗಿದೆ.
ಟಾಪ್ 4 ರಲ್ಲಿ ಕಾಣಿಸಿಕೊಳ್ಳಲು ಎರಡೂ ತಂಡಗಳಿಗೂ ಹೆಚ್ಚಿನ ಪಂದ್ಯಗಳನ್ನು ಗೆಲ್ಲಲೇಬೇಕಾದ ಅನಿವಾರ್ಯತೆಯಿದೆ. ಇಂದಿ ಪಂದ್ಯವನ್ನು ಪಂಜಾಬ್ ಗೆದ್ದರೆ ಅಗ್ರ ನಾಲ್ಕಕ್ಕೇರಲಿದೆ. ಕೊನೆಯ ಸ್ಥಾನದಲ್ಲಿರುವ ಕೆಕೆಆರ್ 6ನೇ ಸ್ಥಾನಕ್ಕೆ ಬರಲಿದೆ.
ಮುಖಾಮುಖಿ
ಎರಡು ತಂಡಗಳು ಐಪಿಎಲ್ನಲ್ಲಿ 27 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಕೆಕೆಆರ್ 18 ಮತ್ತು ಪಂಜಾಬ್ 9 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಕಳೆದ ವರ್ಷ ಎರಡೂ ತಂಡಗಳು ತಲಾ ಒಂದು ಪಂದ್ಯದಲ್ಲಿ ಗೆಲುವು ಸಾಧಿಸಿದ್ದವು.
ಪಂಜಾಬ್ ಕಿಂಗ್ಸ್: ಕೆ.ಎಲ್. ರಾಹುಲ್ (ನಾಯಕ / ವಿಕೀ), ಮಯಾಂಕ್ ಅಗರ್ವಾಲ್, ಕ್ರಿಸ್ ಗೇಲ್, ನಿಕೋಲಸ್ ಪೂರನ್, ದೀಪಕ್ ಹೂಡಾ, ಮೊಯಿಸಸ್ ಹೆನ್ರಿಕ್ಸ್, ಶಾರುಖ್ ಖಾನ್, ಜೇ ರಿಚರ್ಡ್ಸನ್ / ರಿಲೆ ಮೆರೆಡಿತ್, ಮೊಹಮ್ಮದ್ ಶಮಿ, ಅರ್ಷ್‌ದೀಪ್ ಸಿಂಗ್, ರವಿ ಬಿಷ್ಣೋಯ್
ಕೆಕೆಆರ್ : ನಿತೀಶ್ ರಾಣಾ, ಶುಬ್ಮನ್ ಗಿಲ್, ರಾಹುಲ್ ತ್ರಿಪಾಠಿ, ಇಯಾನ್ ಮಾರ್ಗನ್(ನಾಯಕ), ದಿನೇಶ್ ಕಾರ್ತಿಕ್ (ವಿಕೀ), ಸುನೀಲ್ ನರೈನ್, ಆಂಡ್ರೆ ರಸ್ಸೆಲ್, ಪ್ಯಾಟ್ ಕಮ್ಮಿನ್ಸ್, ಹರ್ಭಜನ್ ಸಿಂಗ್, ವರುಣ್ ಚಕ್ರವರ್ತಿ, ಶಿವಂ ಮಾವಿ