ನವದೆಹಲಿ: ಮಂಗಳವಾರ ನಡೆದ ಐಪಿಎಲ್ನ ನಾಲ್ಕನೇ ಪಂದ್ಯದಲ್ಲಿ ಚೆನ್ನೈ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಟೀಕೆ ವ್ಯಕ್ತವಾಗಿದ್ದು, ಟೀಂ ಇಂಡಿಯಾ ಮಾಜಿ ನಾಯಕ ವಿರೇಂದ್ರ ಸೆಹ್ವಾಗ್ ಕೂಡ ಬೇಸರ ವ್ಯಕ್ತಪಡಿಸಿದ್ದಾರೆ.
ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಧೋನಿ ತೆಗೆದುಕೊಂಡ ಕೆಲವು ನಿರ್ಧಾರಗಳನ್ನು ಗಮನಿಸಿದ ಸೆಹ್ವಾಗ್ ಆಚ್ಚರಿ ವ್ಯಕ್ತಪಡಿಸಿದ್ದು, ಧೋನಿ ನಾಯಕತ್ವಕ್ಕೆ 10ಕ್ಕೆ 4 ಅಂಕ ನೀಡಿದ್ದಾರೆ.
ಈ ಕುರಿತು ಕ್ರೀಡಾ ವೆಬ್ಸೈಟ್ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಸೆಹ್ವಾಗ್, ಸ್ಯಾಮ್ ಕರ್ರನ್ ಔಟ್ ಆದ ನಂತರ ರವೀಂದ್ರ ಜಡೇಜಾ ಬದಲಾಗಿ ಧೋನಿ ಬ್ಯಾಟಿಂಗ್ ಮಾಡಬಹುದಿತ್ತು ಎಂದು ನಾನು ಭಾವಿಸುತ್ತೇನೆ. ಮಧ್ಯಮ ಓವರ್‌ಗಳಲ್ಲಿ ರನ್ ಗಳಿಸುವುದು ನಿಧಾನವಾಯಿತು. ಇದರಿಂದ ಕೊನೆಯ ಓವರ್‌ಗಳಲ್ಲಿ ಗೆಲ್ಲಲು ಸುಮಾರು 20 ರಿಂದ 22 ರನ್ ಬೇಕಾಯಿತು.
ಅಂತಿಮ ಓವರ್ನಲ್ಲಿ ಧೋನಿ ಸಿಡಿಸದ ಸಿಕ್ಸರ್ಗಳು ವ್ಹಾವ್ ವಾಟ್ ಎ ಫಿನಿಶ್ ಎನ್ನುವಂತೆ ಮಾಡಿತು. ಆದರೆ 30 ಕ್ಕಿಂತ ಹೆಚ್ಚು ರನ್ಗಳು ಅಗತ್ಯವಿದ್ದರೆ, ಆ ಮೂರು ಸಿಕ್ಸರ್ಗಳು ವ್ಯತ್ಯಾಸವನ್ನುಂಟುಮಾಡುವುದಿಲ್ಲ. ನನ್ನ ಪ್ರಕಾರ ಧೋನಿ, ಕನಿಷ್ಠ ಕೇದಾರ್ ಜಾಧವ್ ಅವರಿಗಿಂತ ಮೊದಲೇ ಬ್ಯಾಟಿಂಗ್ ಮಾಡಬಹುದಿತ್ತು. ಜಾಧವ್ ಎದುರಿಸಿದ ಎಸೆತಗಳನ್ನು ಧೋನಿ ಎದುರಿಸಿದ್ದರೆ, ಸಿಎಸ್ಕೆಗೆ 16 ರನ್ಗಳ ಅಂತರದ ಸೋಲು ಎದುರಾಗುತ್ತಿರಲಿಲ್ಲ ಎಂದಿದ್ದಾರೆ.
ರಾಜಸ್ಥಾನ ವಿರುದ್ಧ ಧೋನಿ ನಾಯಕತ್ವದಲ್ಲಿ ಸೆಹ್ವಾಗ್ ಕಂಡುಕೊಂಡ ಮತ್ತೊಂದು ನ್ಯೂನ್ಯತೆಯೆಂದರೆ, ಪಿಯೂಶ್ ಚಾವ್ಲಾ ಮತ್ತು ರವೀಂದ್ರ ಜಡೇಜಾ ಮೇಲೆ ಸಂಜು ಸ್ಯಾಮ್ಸನ್ ಸವಾರಿ ಮಾಡುವುದನ್ನು ನೋಡಿಯೂ ಬೌಲಿಂಗ್ನಲ್ಲಿ ಯಾವುದೇ ಬದಲಾವಣೆ ಮಾಡಲಿಲ್ಲ, ಇಬ್ಬರೂ ಹೆಚ್ಚು ರನ್ ಬಿಟ್ಟುಕೊಟ್ಟರು ಎಂದಿದ್ದಾರೆ.
ಧೋನಿ, ಲುಂಗಿ ಎಂಗಿಡಿಯನ್ನು ಕರೆತಂದು ಸ್ಯಾಮ್ಸನ್‌ರನ್ನು ಔಟ್ ಮಾಡಿದ್ರು. ಆಗ ಮತ್ತೆ ಬೌಲಿಂಗ್ ನಡೆಸಿದ ಚಾವ್ಲಾ ಎರಡು ಓವರ್‌ಗಳಲ್ಲಿ ಕೇವಲ 8 ರನ್ ಬಿಟ್ಟುಕೊಟ್ಟರು. ಧೋನಿ ಈ ಬದಲಾವಣೆಗಳನ್ನು ಮೊದಲೇ ಮಾಡಬೇಕಿತ್ತು ಎಂಬುದನ್ನು ಇದು ತೋರಿಸುತ್ತದೆ.
ಸ್ಯಾಮ್ಸನ್ ವಿರುದ್ಧದ ಸ್ಪಿನ್ನರ್ಗಳನ್ನು ಬೌಲಿಂಗ್ ಮಾಡಲು ಮುಂದುವರೆಸಿದ್ದು, ಮತ್ತು 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಿದ್ದು ಧೋನಿ ನಾಯಕತ್ವದಲ್ಲಿ ನಾನು ಕಂಡ ನ್ಯೂನ್ಯತೆ ಎಂದು ಸೆಹ್ವಾಗ್ ಹೇಳಿದ್ದಾರೆ.