ಅಬುಧಾಬಿ: ಶೇಖ್ ಜಾಯೆದ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದ ವೇಳೆ ಐಪಿಎಲ್ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಮುಂಬೈ ಇಂಡಿಯನ್ಸ್ ಬ್ಯಾಟ್ಸ್‌ಮನ್ ಹಾರ್ದಿಕ್ ಪಾಂಡ್ಯ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಲ್‌ರೌಂಡರ್ ಕ್ರಿಸ್ ಮೋರಿಸ್ ಅವರನ್ನು ಮ್ಯಾಚ್ ರೆಫ್ರಿ ಖಂಡಿಸಿದ್ದಾರೆ.
ಮುಂಬೈ 165 ರನ್ಗಳ ಗುರಿ ಚೇಸ್ ಮಾಡುತ್ತಿದ್ದಾಗ, 19 ನೇ ಓವರ್‌ನ ಐದನೇ ಎಸೆತದಲ್ಲಿ ಮೋರಿಸ್, ಪಾಂಡ್ಯ ಅವರ ವಿಕೆಟ್ ಪಡೆದರು. ಈ ವೇಳೆ ಇಬ್ಬರು ಆಟಗಾರರ ನಡುವೆ ಮಾತಿನ ಚಕಮಕಿ ನಡೆಯಿತು. ಔಟ್ ಆಗಿದ್ದಕ್ಕೆ ಬೇಸರವಾಗಿದ್ದ ಪಾಂಡ್ಯ, ಕ್ರಿಸ್ ಮಾರಿಸ್ ಕಡೆ ಬೆರಳು ತೋರಿಸಿದರು.
ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಆಲ್‌ರೌಂಡರ್‌ಗಳಾದ ಪಾಂಡ್ಯ ಮತ್ತು ಮೋರಿಸ್ ಅವರ ನಡೆಯನ್ನು ಖಂಡಿಸಲಾಗಿದೆ. ಮೋರಿಸ್ ಐಪಿಎಲ್‌ನ ನೀತಿ ಸಂಹಿತೆಯ ಲೆವೆಲ್ 1 ಅಪರಾಧ 2.5 ನಿಯಮ ಒಪ್ಪಿಕೊಂಡರೆ, ಪಾಂಡ್ಯ ಲೆವೆಲ್ 1 ಅಪರಾಧ 2.20 ಅನ್ನು ಒಪ್ಪಿಕೊಂಡಿದ್ದಾರೆ.
ಆರ್ಸಿಬಿ ನೀಡಿದ್ದ 165 ರನ್ಗಳ ಗುರಿ ಬೆನ್ನತ್ತಿದ ಹಾಲಿ ಚಾಂಪಿಯನ್ಸ್ ಇನ್ನೂ 5 ಎಸೆತಗಳಿರುವಂತೆ ಗುರಿ ತಲುಪುವ ಮೂಲಕ ಜಯ ಸಾಧಿಸಿತು. ಈ ಮೂಲಕ ಅಂಕಪಟ್ಟಿಯಲ್ಲಿ 16 ಅಂಕಗಳನ್ನು ಪಡೆದು ಅಗ್ರಸ್ಥಾನ ಉಳಿಸಿಕೊಂಡಿತಲ್ಲದೆ, ಪ್ಲೇ ಆಫ್ಗೆ ಎಂಟ್ರಿ ಕೊಟ್ಟಿತು.