ದುಬೈ: ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಹೈದರಾಬಾದ್ ತಂಡವನ್ನು ಗೆಲುವಿನತ್ತ ಕೊಂಡೊಯ್ದ ಮಧ್ಯಮ ಕ್ರಮಾಂಕದ ಆಟಗಾರರು, ಪ್ಲೇ ಆಫ್‌ಗೆ ಅರ್ಹತೆ ಪಡೆಯುವ ಸಾಧ್ಯತೆಯನ್ನು ಜೀವಂತವಾಗಿರಿಸಿದರು ಎಂದು ಹೈದರಾಬಾದ್ ನಾಯಕ ಡೇವಿಡ್ ವಾರ್ನರ್ ಸಂತೋಷಪಟ್ಟಿದ್ದಾರೆ.
ಪಂದ್ಯ ಮುಗಿದ ಬಳಿಕ ಮಾತನಾಡಿದ ಡೇವಿಡ್ ವಾರ್ನರ್, "ನಾವು ಮಧ್ಯಮ ಕ್ರಮಾಂಕವನ್ನು ಹೊಂದಿದ್ದೇವೆ ಎಂದು ಜನರಿಗೆ ತೋರಿಸಿದ್ದೇವೆ. ಈ ಬಗ್ಗೆ ಯಾವಾಗಲೂ ಪ್ರಶ್ನೆ ಉದ್ಭವಿಸುತ್ತಿತ್ತು. ಹಿಂದಿನ ಪಂದ್ಯಗಳಲ್ಲಿ ಅವರಿಗೆ ಬ್ಯಾಟಿಂಗ್ ಮಾಡಲು ಹೆಚ್ಚು ಸಮಯವಿರಲಿಲ್ಲ. ಕಳೆದ ಪಂದ್ಯದಲ್ಲಿ ಆರಂಭಿಕ ವಿಕೆಟ್‌ಗಳನ್ನು ಕಳೆದುಕೊಂಡಿರಲಿಲ್ಲ. ಅವರು ಉತ್ತಮವಾಗಿ ಬ್ಯಾಟ್ ಬೀಸಿರುವುದು ಸಂತೋಷವಾಗಿದೆ" ಎಂದು ಹೇಳಿದ್ದಾರೆ.
ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಮನೀಷ್ ಪಾಂಡೆ ಮತ್ತು ವಿಜಯ್ ಶಂಕರ್ ಮೂರನೇ ವಿಕೆಟ್‌ಗೆ ಅಜೇಯ 140 ರನ್ ಗಳಿಸಿ ಹೈದರಾಬಾದ್ ತಂಡಕ್ಕೆ ಎಂಟು ವಿಕೆಟ್‌ಗಳ ಗೆಲುವು ತಂದುಕೊಟ್ರು.
ಆಡಿದ ಮೊದಲ ಪಂದ್ಯದಲ್ಲೇ ಮಿಂಚಿದ ಹೋಲ್ಡರ್ ಬಗ್ಗೆ ವಾರ್ನರ್ ಮೆಚ್ಚುಗೆ ಸೂಚಿಸಿದ್ದಾರೆ, "ಜೇಸನ್ ನಮ್ಮ ಬೌಲಿಂಗ್ಗೆ ಹೊಸ ಶಕ್ತಿ ತುಂಬಿದ್ದಾರೆ. ಅವರಿಗೆ ಬ್ಯಾಟಿಂಗ್ ಮಾಡಲು ಅವಕಾಶ ಸಿಗಲಿಲ್ಲ. ಅವರೊಬ್ಬ ಗುಣಮಟ್ಟದ ಆಟಗಾರ" ಎಂದಿದ್ದಾರೆ.