ಅಬುಧಾಬಿ: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿ ಅಗ್ರಸ್ಥಾನಕ್ಕೇರಿದ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ತಂಡದ ಬೌಲಿಂಗ್ ದಾಳಿಯನ್ನು ಆಲ್ರೌಂಡರ್ ಕೃನಾಲ್ ಪಾಂಡ್ಯ ಹಾಡಿ ಹೊಗಳಿದ್ದಾರೆ.
ಡೆಲ್ಲಿ ನೀಡಿದ್ದ 163 ರನ್ಗಳ ಟಾರ್ಗೆಟ್ ಅನ್ನು ಇನ್ನೆರಡು ಬಾಲ್ ಇರುವಂತೆಯೇ 5 ವಿಕೆಟ್ ಕಳೆದುಕೊಂಡು ಗುರಿಮುಟ್ಟಿತು. ಸೂರ್ಯಕುಮಾರ್ ಯಾದವ್ ಹಾಗೂ ಕ್ವಿಂಟನ್ ಡಿಕಾಕ್ ಅರ್ಧ ಶತಕದ ನೆರವಿನಿಂದಾಗಿ ಮುಂಬೈ ತಂಡ ಗೆಲುವಿನ ನಗೆಬೀರಿತು. ಇನ್ನು ಮುಂಬೈ ತಂಡದ ಗೆಲುವಲ್ಲಿ ಬೌಲರ್ ಕೃನಾಲ್ ಪಾಂಡ್ಯ ಸಹ ಪ್ರಮುಖ ಪಾತ್ರವಹಿಸಿದಲ್ಲದೆ 4 ಓವರ್ ಮಾಡಿ 26 ರನ್ ನೀಡಿ 2 ವಿಕೆಟ್ ಪಡೆದಿದ್ದರು.
ಗೆಲುವಿನ ಬಳಿಕ ಮಾತನಾಡಿದ ಆಲ್ರೌಂಡರ್ ಕೃನಾಲ್ ಪಾಂಡ್ಯ ‘ನಾವು ಉತ್ತಮವಾಗಿ ಬೌಲಿಂಗ್ ಪ್ರದರ್ಶನ ಮಾಡಿದೆವು. ಅದರಲ್ಲೂ ವಿಶೇಷವಾಗಿ ಪವರ್ ಪ್ಲೇನಲ್ಲಿ ನಾವು ಉತ್ತಮ ರೀತಿಯ ಬೌಲಿಂಗ್ ಮಾಡಿದ್ದೆವು. ಇದು ಎದುರಾಳಿಗಳಿಗೆ ಉತ್ತಡ ಹೆಚ್ಚುವಂತೆ ಮಾಡಿತು. ಅಲ್ಲದೆ ಡೆತ್ ಓವರ್ಗಳಲ್ಲಿ ಸಹ ನಾವು ಹೆಚ್ಚು ರನ್ ನೀಡಲಿಲ್ಲ. ಈ ನಡುವೆ ಚಾಹರ್ ಸಹ ಉತ್ತಮ ಬೌಲಿಂಗ್ ಮಾಡಿದರು’ ಎಂದಿದ್ದಾರೆ.
‘ಇದಲ್ಲದೆ ನಮ್ಮ ತಂಡದಲ್ಲಿ ಗಂಟೆಗೆ 140 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡಬಲ್ಲ ಮೂವರು ಬೌಲರ್ಗಳು ಇರುವುದು ನಮಗೊಂದು ಆರ್ಶೀವಾದವಿದ್ದಂತೆ. ಯಾವುದೇ ತಂಡಕ್ಕೆ ವೇಗ ಮತ್ತು ಸ್ವಿಂಗ್ ಮಾಡುವ ಬೌಲರ್ಗಳಿದ್ದರೆ ಉತ್ತಮ. ಡೆಲ್ಲಿ ವಿರುದ್ಧ ನಾನು ಮಾಡಿದ ಬೌಲಿಂಗ್ ಬಗ್ಗೆ ನನಗೆ ಮೆಚ್ಚುಗೆ ಇದೆ’ ಎಂದಿದ್ದಾರೆ.
‘ನಾವು ಎಲ್ಲಾ ಪಂದ್ಯಗಳಲ್ಲಿ ಗುಣಮಟ್ಟದ ಆಟ ಆಡಿದ್ದೇವೆ, ಲೀಗ್ನಲ್ಲಿ ನಾವು ಇಲ್ಲಿಯವರೆಗೆ ಏನು ಮಾಡಿದ್ದೇವೆ ಎಂಬುದನ್ನು ಮರು ಮೌಲ್ಯಮಾಪನ ಮಾಡುತ್ತೇವೆ. ನಾವು ಅನೇಕ ವಿಷಯಗಳನ್ನು ಸರಿಯಾಗಿ ಮಾರ್ಗದಲ್ಲಿ ಮುನ್ನಡೆಸಿದ್ದರ ಪರಿಣಾಮ ನಾವು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದೇವೆ. ಆದರೆ ಒಟ್ಟಾರೆಯಾಗಿ, ತಂಡವಾಗಿ, ನಾವು ಎಲ್ಲಾ ಪಂದ್ಯಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದೇವೆ. ಪಂದ್ಯಾವಳಿಯ ದ್ವಿತಿಯಾರ್ಧದಲ್ಲಿ ನಾವು ಬಲಶಾಲಿಯಾಗಲು ಇನ್ನಷ್ಟು ಕೆಲಸ ಮಾಡುತ್ತೇವೆ’ಎಂದು ಕೃನಾಲ್ ಹೇಳಿದ್ದಾರೆ.