ದುಬೈ: ಟಿ-20 ಕ್ರಿಕೆಟ್ ಹಾಗೂ ಐಪಿಎಲ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಒಂದೇ ಪಂದ್ಯದಲ್ಲಿ ಎರಡು ಸೂಪರ್ ಓವರ್ ನಡೆದಿದ್ದು, ಐತಿಹಾಸಿಕ ಪಂದ್ಯದಲ್ಲಿ ಜಯ ಸಾಧಿಸಿದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಗೆಲುವು ಸಾಧಿಸಿದೆ. ಈ ಗೆಲುವು ನಮ್ಮ ತಂಡ ಕಂಬ್ಯಾಕ್ ಮಾಡಲು ಸಹಕಾರಿಯಾಗಲಿದೆ ಎಂದು ನಾಯಕ ಕೆ.ಎಲ್.ರಾಹುಲ್ ಹೇಳಿದ್ದಾರೆ.
ಪಂದ್ಯ ಮುಗಿದ ಬಳಿಕ ಮಾತನಾಡಿದ ಕೆ.ಎಲ್.ರಾಹುಲ್, "ಇಂತಹ ಪರಿಸ್ಥಿತಿ ಯಾವಾಗಲು ಎದುರಾಗುವುದಿಲ್ಲ. ಹೀಗಾಗಿ ಈ ರೀತಿಯ ಪರಿಸ್ಥಿತಿಯಲ್ಲಿ ಸಮತೋಲನದಲ್ಲಿರುವುದು ಹೇಗೆ ಎಂದು ತಿಳಿದಿಲ್ಲ. ನಾವು ಸೋತ ಪಂದ್ಯಗಳಲ್ಲಿಯೂ ಸಹ ಅದ್ಭುತ ಪ್ರದರ್ಶನ ನೀಡಿದ್ದೇವೆ. ನಾವು ಪ್ರತಿಯೊಂದು ಪಂದ್ಯದಲ್ಲೂ ಉತ್ತಮವಾಗಿ ಕಂಬ್ಯಾಕ್ ಮಾಡಲು ಬಯಸುತ್ತೇವೆ. ಇಂತಹ ಗೆಲುವುಗಳು ನಮಗೆ ಸಹಕಾರಿಯಾಗಲಿವೆ" ಎಂದಿದ್ದಾರೆ.

"ಯಾವುದೇ ತಂಡವು ಸೂಪರ್ ಓವರ್‌ಗಳಿಗೆ ಸಿದ್ಧತೆ ನಡೆಸುವುದಿಲ್ಲ. ನಿಮ್ಮ ಬೌಲಿಂಗ್ ಯುನಿಟ್ ಮೇಲೆ ನಂಬಿಕೆ ಬೇಕು. ಶಮಿ ಆರು ಎಸೆತಗಳನ್ನೂ ಯಾರ್ಕರ್ ಎಸೆಯಬೇಕೆಂದು ಹೋಗಿದ್ದರು. ಸೂಪರ್ ಓವರ್ನಲ್ಲಿ ಅಸಾಧಾರಣ ಪ್ರದರ್ಶನ ನೀಡಿದ್ರು. ಹಿರಿಯ ಆಟಗಾರರು ನಮ್ಮ ಕೈ ಹಿಡಿಯುವುದು ಮುಖ್ಯವಾಗಿದೆ. ಮೊದಲ ಏಳು ಪಂದ್ಯಗಳಲ್ಲಿ ನೀವು ಸಾಕಷ್ಟು ಜಯ ಗಳಿಸದಿದ್ದಾಗ ಪ್ರತಿ ಗೆಲುವು ಸಿಹಿಯಾಗಿರುತ್ತದೆ" ಎಂದು ರಾಹುಲ್ ಸಂತಸ ವ್ಯಕ್ತಪಡಿಸಿದ್ದಾರೆ.
"ಆಟದಲ್ಲಿ ನಮ್ಮ ಪ್ರದರ್ಶನದ ಬಗ್ಗೆ ಕೇಂದ್ರೀಕರಿಸುವುದು ಮತ್ತು ಶಾಂತವಾಗಿರುವುದು ಡ್ರೆಸ್ಸಿಂಗ್ ರೂಮ್ನಲ್ಲಿ ನಡೆದ ಮಾತಿನ ಸಾರಂಶ. ನಾವು ಇಲ್ಲಿಂದ ಎಲ್ಲಾ ಪಂದ್ಯಗಳನ್ನು ಗೆಲ್ಲಬೇಕು ಎಂದು ನಮಗೆ ತಿಳಿದಿದೆ. ನಮ್ಮ ಪ್ರದರ್ಶನವನ್ನು ನಾವು ಆನಂದಿಸುತ್ತಿದ್ದೇವೆ" ಎಂದು ರಾಹುಲ್ ಹೇಳಿದ್ದಾರೆ.
ಒಂಭತ್ತು ಪಂದ್ಯಗಳಲ್ಲಿ 3 ಪಂದ್ಯ ಜಯಿಸಿರುವ ಪಂಜಾಬ್ ಆರು ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಅಕ್ಟೋಬರ್ 20ರಂದು ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದೊಂದಿಗೆ ಸೆಣಸಾಡಲಿದೆ.