ದುಬೈ: 12 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಆರು ಮತ್ತು ಏಳನೇ ಸ್ಥಾನದಲ್ಲಿರುವ ರಾಜಸ್ಥಾನ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ಮುಖಾಮುಖಿಯಾಗುತ್ತಿವೆ. ಗೆದ್ದ ತಂಡ ನಾಕ್ಔಟ್ ರೇಸ್ನಲ್ಲಿ ಜೀವಂತವಾಗಿರಲಿದೆ.
ರಾಜಸ್ಥಾನ ತಂಡ 13 ಪಂದ್ಯಗಳಿಂದ 12 ಅಂಕ ಪಡೆದು ಪಾಯಿಂಟ್ಸ್ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. ಇತ್ತ ಕೋಲ್ಕತ್ತಾ ಕೂಡ 13 ಪಂದ್ಯಗಳಿಂದ 12 ಅಂಕ ಪಡೆದು ಪಾಯಿಂಟ್ಸ್ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ಉಭಯ ತಂಡಗಳಿಗೂ ಇದು ಮಹತ್ವದ ಪಂದ್ಯವಾಗಿದ್ದು, ಉತ್ತಮ ರನ್ರೇಟ್ನೊಂದಿಗೆ ಪಂದ್ಯ ಗೆಲ್ಲಬೇಕಿದೆ.
ಸತತ 2 ಸೋಲುಗಳಿಂದ ಕೆಕೆಆರ್ ತಂಡ ಸಂಕಷ್ಟಕ್ಕೆ ಸಿಲುಕಿದೆ. ಶುಬ್ಮನ್ ಗಿಲ್, ಮಾರ್ಗನ್, ಸುನೀಲ್ ನರೈನ್, ನಿತೀಶ್ ರಾಣಾ ಮೇಲೆ ಇಂದು ಹೆಚ್ಚು ಜವಾಬ್ದಾರಿ ಇದೆ. ಬೌಲಿಂಗ್ ವಿಭಾಗದಲ್ಲಿ ವರುಣ್ ಚಕ್ರವರ್ತಿ, ಪ್ಯಾಟ್ ಕಮ್ಮಿನ್ಸ್, ಲೂಕಿ ಫರ್ಗ್ಯುಸನ್, ಕಮಲೇಶ್ ನಾಗರಕೋಟಿ, ನರೈನ್ ಕಮಾಲ್ ಮಾಡಿದ್ರೆ ಕೋಲ್ಕತ್ತಾ ಗೆಲುವು ಕಷ್ಟವೇನಲ್ಲ.
ಇತ್ತ ಸತತ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ರಾಜಸ್ಥಾನ ತಂಡ ಇಂದಿನ ಪಂದ್ಯವನ್ನೂ ಗೆಲ್ಲುವ ವಿಶ್ವಾಸ ಹೊಂದಿದೆ. ಸ್ಟೋಕ್ಸ್, ಸಾಮ್ಸನ್, ಸ್ಮಿತ್ ಮತ್ತು ಬಟ್ಲರ್ ಲಯದಲ್ಲಿರುವುದು ರಾಜಸ್ಥಾನ ತಂಡದ ಶಕ್ತಿ ಹೆಚ್ಚಿಸಿದೆ. ಬೌಲಿಂಗ್ನಲ್ಲಿ ಜೋಫ್ರಾ ಆರ್ಚರ್, ಶ್ರೇಯಸ್ ಗೋಪಾಲ್, ರಾಹುಲ್ ತೆವಾಟಿಯಾ, ಕಾರ್ತಿಕ್ ತ್ಯಾಗಿ ಉತ್ತಮವಾಗಿ ಸ್ಪೆಲ್ ಮಾಡುತ್ತಿದ್ದಾರೆ.