ಅಬುಧಾಬಿ: ಇಂದು ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ನ ದ್ವಿತೀಯ ಕ್ವಾಲಿಫೈಯರ್ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ.
ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಜಯ ಗಳಿಸಿದ್ದ ಡೆಲ್ಲಿ ಕ್ಯಾಪಿಟಲ್ಸ್ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಮುಂಬೈ ತಂಡವನ್ನು ಎದುರಿಸಿತ್ತು. ರೋಹಿತ್ ಪಡೆ ಬೌಲಿಂಗ್ ದಾಳಿಗೆ ತತ್ತರಿಸಿದ್ದ ಕ್ಯಾಪಿಟಲ್ಸ್ ತಂಡ ಮೊದಲ ಕ್ವಾಲಿಫೈಯರ್ನಲ್ಲಿ ಸೋಲು ಕಂಡಿತ್ತು.
ಇದೀಗ ಫೈನಲ್ ಹಂತ ತಲುಪಲು ಮತ್ತೊಂದು ಅವಕಾಶ ಪಡೆದಿರುವ ಡೆಲ್ಲಿ ಇಂದಿನ ಪಂದ್ಯ ಗೆಲ್ಲಬೇಕಿದೆ. ಡೆಲ್ಲಿ ಬ್ಯಾಟ್ಸ್ಮನ್ಗಳಾದ ಧವನ್, ಪೃಥ್ವಿ ಶಾ, ರಹಾನೆ ಇಂದು ಸಿಡಿಯಬೇಕಿದೆ. ನಾಯಕ ಅಯ್ಯರ್ ಕೂಡ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ್ರೆ ಡೆಲ್ಲಿ ಗೆಲುವು ಕಾಣಲು ಸಾಧ್ಯವಾಗಲಿದೆ.
ಕಳೆದ ಪಂದ್ಯದಲ್ಲಿ ಡೆಲ್ಲಿ ಬೌಲರ್ಗಳು ದುಬಾರಿಯಾಗಿದ್ದರು, ಡೆತ್ ಓವರ್ನಲ್ಲಿ ಸಾಕಷ್ಟು ರನ್ ಬಿಟ್ಟುಕೊಟ್ಟಿದ್ರು. ಕಗಿಸೊ ರಬಾಡ, ನೋರ್ಟ್ಜೆ ಮಾರಕ ದಾಳಿ ನಡೆಸಬೇಕಿದೆ. ಅಕ್ಸರ್ ಪಟೇಲ್, ಆರ್.ಅಶ್ವಿನ್, ಸ್ಟೋಯ್ನಿಸ್ ಎದುರಾಳಿಗಳನ್ನು ಕಟ್ಟಿಹಾಕುವ ಸಾಮರ್ಥ್ಯ ಹೊಂದಿದ್ದಾರೆ.
ಸತತ ನಾಲ್ಕು ಪಂದ್ಯಗಳಲ್ಲಿ ಬಲಿಷ್ಠ ತಂಡಗಳನ್ನು ಮಣಿಸಿರುವ ಹೈದರಾಬಾದ್ ಇಂದಿನ ಪಂದ್ಯದಲ್ಲಿ ಡೆಲ್ಲಿ ಮಣಿಸಿ ಫೈನಲ್ ತಲುಪುವ ಭರವಸೆ ಹೊಂದಿದೆ. ಕಳೆದ ಪಂದ್ಯದಿಂದ ಹೊರಗುಳಿದಿದ್ದ ವೃದ್ಧಿಮಾನ್ ಸಹಾ ಇಂದು ಕಣಕ್ಕಿಳಿಯುವ ಸಾಧ್ಯತೆ ಇದೆ. ನಾಯಕ ವಾರ್ನರ್, ಮನೀಷ್ ಪಾಂಡೆ, ವಿಲಿಯಮ್ಸನ್ ಉತ್ತಮ ಫಾರ್ಮ್ನಲ್ಲಿದ್ದಾರೆ.
ಬೌಲಿಂಗ್ನಲ್ಲೂ ಹೈದರಾಬಾದ್ ಬೌಲಿಂಗ್ ಶಕ್ತಿಯುತವಾಗಿದೆ. ಸಂದೀಪ್ ಶರ್ಮಾ, ನಟರಾಜನ್, ರಶೀದ್ ಖಾನ್ ಹಾಗೂ ಜೇಸನ್ ಹೋಲ್ಡರ್ ಅದ್ಭುತ ಪ್ರದರ್ಶನ ನೀಡುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟಿದ್ದು, ಇಂದಿನ ಪಂದ್ಯದಲ್ಲೂ ಮಿಂಚುವ ವಿಶ್ವಾಸ ಹೊಂದಿದ್ದಾರೆ.
ಇಂದಿನ ಪಂದ್ಯದಲ್ಲಿ ಗೆಲುವು ಸಾಧಿಸಲಿರುವ ತಂಡ ಮಂಗಳವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ.