ದುಬೈ: ಈ ಬಾರಿಯ ಐಪಿಎಲ್ ಟೂರ್ನಿಯೂ ಇನ್ನಿಲ್ಲದ ಕುತೂಹಲಕ್ಕೆ ಕಾರಣವಾಗಿದೆ. ಪ್ಲೇ ಆಫ್ನಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಇನ್ನೆರಡು ತಂಡಗಳು ಪೈಪೋಟಿಯಲ್ಲಿವೆ. ಇಂದು ನಡೆಯಲಿರುವ ಕೊನೆಯ ಲೀಗ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ಸೆಣಸಾಡಲಿವೆ.
ಈಗಾಗಲೇ ಪ್ಲೇ ಆಫ್ಗೆ ಎಂಟ್ರಿ ಪಡೆದಿರುವ ಬಲಿಷ್ಠ ಮುಂಬೈ ತಂಡದ ವಿರುದ್ಧ ಹೈದರಾಬಾದ್ ಮಾಡು ಇಲ್ಲವೆ ಮಡಿ ಪಂದ್ಯ ಆಡಲಿದೆ. ಪ್ಲೇ ಆಫ್ಗೆ ಸ್ಥಾನ ಪಡೆಯಬೇಕಾದರೆ ಹೈದರಾಬಾದ್ ಈ ಪಂದ್ಯ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ.
18 ಅಂಕಗಳ ಮೂಲಕ ಮೊದಲ ಸ್ಥಾನದಲ್ಲಿ ಭದ್ರವಾಗಿರುವ ಹಾಲಿ ಚಾಂಪಿಯನ್ಸ್ ವಿರುದ್ಧ ಇಂದು ವಾರ್ನರ್ ಪಡೆ ಪ್ಲೇ ಆಫ್ ತಲುಪಲು ಗೆಲ್ಲಬೇಕಾಗಿದೆ. ಇನ್ನು ಹೈದರಾಬಾದ್ ತಂಡ ದೆಹಲಿ ಹಾಗೂ ಬೆಂಗಳೂರು ತಂಡದ ಮೇಲೆ ಭರ್ಜರಿ ಜಯ ದಾಖಲಿಸಿ ವಿಶ್ವಾಸ ಹೆಚ್ಚಿಕೊಂಡಿದ್ದು, ಇಂದಿನ ಪಂದ್ಯ ಗೆದ್ದು ಬೀಗುವ ತಯಾರಿ ನಡೆಸಿದೆ.
ಹೈದರಾಬಾದ್ಗೆ ಟಾಪ್ ಆರ್ಡರ್ ಬ್ಯಾಟ್ಸ್ಮನ್ಗಳೇ ಆಧಾರವಾಗಿದ್ದು, ವಾರ್ನರ್, ಮನೀಶ್ ಪಾಂಡೆ, ಕೇನ್ ವಿಲಿಯಮ್ಸನ್, ವೃದ್ಧಿಮಾನ್ ಸಾಹ ಸೇರಿದಂತೆ ಆಲ್ರೌಂಡರ್ ಜೇಸನ್ ಹೋಲ್ಡರ್ ಅಬ್ಬರದ ಬ್ಯಾಟಿಂಗ್ ನಡೆಸಿ, ಬೌಲಿಂಗ್ ದಾಳಿಯಲ್ಲೂ ಸಮರ್ಥ ತಂಡ ಎನಿಸಿಕೊಂಡಿದೆ.
ಇನ್ನೊಂದೆಡೆ ಮುಂಬೈ ಇಂಡಿಯನ್ಸ್ ಸಮತೋಲನ ತಂಡವಾಗಿ ಕಣಕ್ಕಿಳಿಯುತ್ತಿದೆ. ಇಶನ್ ಕಿಶನ್, ಆರ್ರೌಡರ್ ಕೀರನ್ ಪೊಲಾರ್ಡ್ ಭರ್ಜರಿ ಫಾರ್ಮ್ನಲ್ಲಿದ್ದು, ರೋಹಿತ್ ಶರ್ಮಾರ ಅನುಪಸ್ಥಿತಿಯಲ್ಲೂ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದೆ.
ಇವರಿಬ್ಬರಲ್ಲದೆ ಆರಂಭಿಕರಾದ ಕ್ವಿಂಟನ್ ಡಿ ಕಾಕ್ ಹಾಗೂ ಸೂರ್ಯಕುಮಾರ್ ಯಾದವ್ ಮುಂಬೈಗೆ ಆನೆ ಬಲವಿದ್ದಂತೆ. ಇವರಲ್ಲದೆ ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ ಸಹ ತಂಡಕ್ಕೆ ಅಗತ್ಯವಾದ ಸಮಯದಲ್ಲಿ ರನ್ ಮಳೆ ಸುರಿಸಿದ್ದಾರೆ.
ಇತ್ತ ಬೌಲಿಂಗ್ ವಿಭಾಗದಲ್ಲಿ ಸಹ ಮುಂಬೈ ಬಲಿಷ್ಠವಾಗಿದೆ. ಡೆತ್ ಓವರ್ ಸ್ಪೆಷಲಿಸ್ಟ್ ಅಂತಲೇ ಕರೆಸಿಕೊಳ್ಳುವ ಜಸ್ಪ್ರಿತ್ ಬೂಮ್ರಾ, ಟ್ರೆಂಟ್ ಬೋಲ್ಟ್, ಹೈದರಾಬಾದ್ ತಂಡವನ್ನು ಕಟ್ಟಿಹಾಕುವ ಸಾಮರ್ಥ್ಯ ಹೊಂದಿದ್ದಾರೆ. ಇವರ ಜೊತೆ ಪೊಲಾರ್ಡ್, ಕೃನಾಲ್ ಸಹ ಸಾಥ್ ನೀಡಲಿದ್ದಾರೆ.
ಈ ಮೊದಲ ಲೀಗ್ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ 34 ರನ್ಗಳ ಅಂತರದಲ್ಲಿ ಮುಂಬೈ ತಂಡ ಜಯಭೇರಿ ಬಾರಿಸಿತ್ತು.