ಶಾರ್ಜಾ: ಇಂದು ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ನ 46ನೇ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ಕೆಕೆಆರ್ ತಂಡಗಳು ಮುಖಾಮುಖಿಯಾಗಲಿದ್ದು, ಪ್ಲೇ ಆಫ್ ಕನಸು ಕಾಣುತ್ತಿರುವ ಎರಡೂ ತಂಡಗಳಿಗೆ ಈ ಪಂದ್ಯ ಮುಖ್ಯವಾಗಿದೆ.
ಉಭಯ ತಂಡಗಳು ಇಲ್ಲಿಯವರೆಗೆ 11 ಪಂದ್ಯಗಳನ್ನು ಆಡಿದ್ದು, ಪಂಜಾಬ್ 5 ಪಂದ್ಯ ಗೆದ್ದು ಪಾಯಿಂಟ್ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ರೆ, ಕೆಕೆಆರ್ 6 ಪಂದ್ಯಗಳನ್ನು ಗೆದ್ದು, 4ನೇ ಸ್ಥಾನದಲ್ಲಿದೆ. ಎರಡೂ ತಂಡಗಳು ನಾಕ್ಔಟ್ ಹಂತಕ್ಕೆ ಅರ್ಹತೆ ಪಡೆಯುವ ತವಕದಲ್ಲಿವೆ.
ಕಳೆದ ಪಂದ್ಯದಲ್ಲಿ ಬಲಿಷ್ಠ ಡೆಲ್ಲಿ ತಂಡಕ್ಕೆ ಸೋಲಿನ ರುಚಿ ತೋರಿಸಿದ್ದ ಕೆಕೆಆರ್ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ. ಆರಂಭಿಕ ಆಟಗಾರ ನಿತೀಶ್ ರಾಣ ಲಯ ಕಂಡುಕೊಂಡಿದ್ದಾರೆ. ಸುನೀಲ್ ನರೈನ್ ಕೂಡ ಫಾರ್ಮ್ಗೆ ಮರಳಿರುವುದು ಕೋಲ್ಕತ್ತಾ ಬ್ಯಾಟಿಂಗ್ ಬಲವನ್ನು ಹೆಚ್ಚಿಸಿದೆ.
ಕಳೆದ ಪಂದ್ಯದಲ್ಲಿ ಮಿಂಚಿದ್ದ ವರುಣ್ ಚಕ್ರವರ್ತಿ ಮತ್ತು ಪ್ಯಾಟ್ ಕಮ್ಮಿನ್ಸ್ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ವೇಗಿ ಲೂಕಿ ಫರ್ಗ್ಯುಸನ್, ಕಮಲೇಶ್ ನಾಗರಕೋಟಿ, ವರುಣ್ ಚಕ್ರವರ್ತಿ, ಪ್ರಸೀದ್ ಕೃಷ್ಣ, ನರೈನ್ ಉತ್ತಮವಾಗಿ ಸ್ಪೆಲ್ ಮಾಡಿದ್ದಾರೆ.
ಇತ್ತ ಪಂಜಾಬ್ ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಕಳೆದ ಪಂದ್ಯದಲ್ಲಿ ಕಡಿಮೆ ರನ್ ಗಳಿಸಿದ್ರು ಹೈದರಾಬಾದ್ ತಂಡವನ್ನು ಸೋಲಿಸಿದ್ದು, ರಾಹುಲ್ ಪಡೆಯ ಶಕ್ತಿಯನ್ನು ಅಲ್ಲಗಳೆಯುವಂತಿಲ್ಲ. ಕಳೆದ ಪಂದ್ಯದಲ್ಲಿ ಬ್ಯಾಟ್ಸ್ಮನ್ಗಳು ವೈಫಲ್ಯ ಅನುಭವಿಸಿದ್ರು. ಆದರೆ ಉತ್ತಮವಾಗಿ ದಾಳಿ ನಡೆಸಿದ ಬೌಲರ್ಗಳು ತಂಡಕ್ಕೆ ಜಯ ತಂದುಕೊಟ್ಟಿದ್ದರು.
ಮೊಹಮ್ಮದ್ ಶಮಿ ಮತ್ತು ರವಿ ಬಿಷ್ಣೋಯಿ, ಎಂ.ಅಶ್ವಿನ್, ಅರ್ಷ್ದೀಪ್ ಸಿಂಗ್, ಕ್ರಿಸ್ ಜೋರ್ಡನ್ ನಡೆಸಿದ ಸಂಘಟಿತ ದಾಳಿಗೆ ಹೈದರಾಬಾದ್ ತಂಡ ಸೋಲು ಕಾಣಬೇಕಾಯ್ತು.
ಉಭಯ ತಂಡಗಳು ಇಲ್ಲಿಯವರೆಗೆ 26 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, 8 ಪಂದ್ಯಗಳಲ್ಲಿ ಪಂಜಾಬ್ ಗೆಲುವು ಸಾಧಿಸಿದ್ರೆ, 18 ಪಂದ್ಯಗಲ್ಲಿ ಕೆಕೆಆರ್ ಗೆಲುವಿನ ನಗೆ ಬೀರಿದೆ.