ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ಗಾಗಿ ಸನ್ ರೈಸರ್ಸ್ ಹೈದರಾಬಾದ್ ತಂಡ ಸೇರಲು ವೆಸ್ಟ್ ಇಂಡೀಸ್ ಟೆಸ್ಟ್ ತಂಡದ ನಾಯಕ ಜೇಸನ್ ಹೋಲ್ಡರ್ ಯುಎಇಗೆ ಆಗಮಿಸಿದ್ದಾರೆ.
ಕೊರೊನಾ ವೈರಸ್ ವಿರುದ್ಧದ ಮುನ್ನೆಚ್ಚರಿಕೆ ಕ್ರಮವಾಗಿ ಕ್ವಾರಂಟೈನ್ಗೆ ಒಳಗಾಗುವುದರಿಂದ ಹೋಲ್ಡರ್, ಆರು ದಿನಗಳ ಕಾಲ ತಮ್ಮ ಕೋಣೆಯಲ್ಲೇ ಕಾಲ ಕಳೆಯಬೇಕಿದೆ. ಕ್ವಾರಂಟೈನ್ ಸಮಯದಲ್ಲಿ ಮೂರು ಬಾರಿ ಕೋವಿಡ್ ಟೆಸ್ಟ್ ನಡೆಸಲಾಗುತ್ತಿದೆ. ಮೂರು ಬಾರಿಯೂ ನೆಗೆಟಿವ್ ಬಂದ ನಂತರವಷ್ಟೆ ಅವರು ತಮ್ಮ ತಂಡದ ಆಟಗಾರರನ್ನು ಸೇರಿಕೊಳ್ಳುತ್ತಾರೆ.
ಯುಎಇಗೆ ಬಂದ ನಂತರ ಎಲ್ಲಾ ಆಟಗಾರರು ಮತ್ತು ತಂಡದ ಸಿಬ್ಬಂದಿ ಆರು ದಿನಗಳ ಕ್ವಾರಂಟೈನ್ನಲ್ಲಿ ಇರಬೇಕಾಗುತ್ತದೆ. ಈ ವೇಳೆ ಪ್ರತಿಯೊಬ್ಬರಿಗೂ ಮೂರು ಬಾರಿ ಕೋವಿಡ್-19 ಪರೀಕ್ಷೆ ನಡೆಸಲಾಗುತ್ತದೆ.
ಸೋಮವಾರ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದ ವೇಳೆ ಹಿಮ್ಮಡಿ ಗಾಯಕ್ಕೆ ತುತ್ತಾಗಿದ್ದ ಆಸಿಸ್ ಆಟಗಾರ ಮಿಚೆಲ್ ಮಾರ್ಷ್, ಟೂರ್ನಿಯಿಂದ ಹೊರಗುಳಿದಿದ್ದಾರೆ. ಹೀಗಾಗಿ ವೆಸ್ಟ್ ಇಂಡೀಸ್ ಆಟಗಾರ ಜೇಸನ್ ಹೋಲ್ಡರ್ ಅವರನ್ನು ಮಿಚೆಲ್ ಮಾರ್ಶ್ ಅವರ ಬದಲಿ ಆಟಗಾರನಾಗಿ ನೇಮಕ ಮಾಡಲಾಗಿದೆ.