ಅಬುಧಾಬಿ: ಅತಿಯಾದ ಇಬ್ಬನಿಯ ಕಾರಣದಿಂದಾಗಿ ಬೌಲರ್ಗಳು ಮೇಲುಗೈ ಸಾಧಿಸಲು ಸಾಧ್ಯವಾಗಲಿಲ್ಲ ಎಂದು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ ಕೆ.ಎಲ್.ರಾಹುಲ್ ಹೇಳಿದ್ದಾರೆ.
ನಿನ್ನೆ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಕಿಂಗ್ಸ್ ಇಲೆವೆನ್ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 185 ರನ್ಗಳಿಸಿತು. ಬೃಹತ್ ಗುರಿ ಬೆನ್ನತ್ತಿದ ರಾಜಸ್ಥಾನ ತಂಡ 17.3 ಓವರ್‌ಗಳಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು 186 ರನ್ ಗಳಿಸಿ ಗೆಲುವಿನ ನಗೆ ಬೀರಿತು.
ಪಂದ್ಯ ಮುಗಿದ ಬಳಿಕ ಮಾತನಾಡಿದ ಕೆ.ಎಲ್.ರಾಹುಲ್, "ಟಾಸ್ ಸೋತದ್ದು ತುಂಬಾ ಪರಿಣಾಮ ಬೀರಿತು. ಬ್ಯಾಟಿಂಗ್ ಮಾಡಲು ತುಂಬಾ ಸುಲಭವಾಯಿತು. ದ್ವಿತೀಯಾರ್ಧದಲ್ಲಿ ಸಾಕಷ್ಟು ಇಬ್ಬನಿ ಬೀಳುತ್ತಿದ್ದರಿಂದ ಬೌಲರ್ಗಳಿಗೆ ಕಠಿಣವಾಯಿತು" ಎಂದು ಹೇಳಿದ್ದಾರೆ.
"ನಾವೇನು ಕೆಟ್ಟದಾಗಿ ಬೌಲಿಂಗ್ ನಡೆಸಿಲ್ಲ. ಆದರೆ ಇಬ್ಬನಿ ಬೀಳುವ ಸಮಯದಲ್ಲಿ ಉತ್ತಮವಾಗಿ ಸ್ಪೆಲ್ ಮಾಡುವುದನ್ನು ಕಲಿಯಬೇಕು. ಈ ಸೀಸನ್ನಲ್ಲಿ ಇಬ್ಬನಿ ಅನಿರೀಕ್ಷಿತವಾಗಿದೆ. ಅದಕ್ಕಾಗಿ ತಯಾರಿ ನಡೆಸಲು ಸಾಧ್ಯವಿಲ್ಲ. ಆದರೆ ಅದನ್ನು ಅಳವಡಿಸಿಕೊಳ್ಳಬೇಕಿದೆ" ಎಂದು ಹೇಳಿದ್ದಾರೆ.
ಸತತ ಐದು ಪಂದ್ಯಗಳನ್ನು ಗೆದ್ದು ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿರುವ ಪಂಜಾಬ್ ತಂಡ, ಶುಕ್ರವಾರದ ಪಂದ್ಯದಲ್ಲಿ ಸೋಲು ಕಂಡಿದ್ದು, ನಾಕ್ಔಟ್ ಹಾದಿ ದುರ್ಗಮವಾಗಿದೆ.