ಅಬುಧಾಬಿ: ಅಂಕಪಟ್ಟಿಯಲ್ಲಿ ಪಟ್ಟಿಯಲ್ಲಿ ಟಾಪ್ ನಾಲ್ಕರಲ್ಲಿ ಸ್ಥಾನ ಪಡೆದಿದ್ರೂ ಆರ್ಸಿಬಿ ಮತ್ತು ಡೆಲ್ಲಿ ತಂಡಗಳು ಇಲ್ಲಿಯವರೆಗೆ ಪ್ಲೇ - ಆಫ್ ಸುತ್ತಿಗೆ ಆಯ್ಕೆಯಾಗಿಲ್ಲ. ಆದರೆ ಇಂದು ಲೀಗ್ ಹಂತದ ಅಂತಿಮ ಪಂದ್ಯದಲ್ಲಿ ಉಭಯ ತಂಡಗಳು ಮುಖಾಮುಖಿಯಾಗುತ್ತಿದ್ದು, ಗೆದ್ದವರಿಗೆ ನಾಕ್ ಔಟ್ ಹಂತದಲ್ಲಿ ಸ್ಥಾನ ಖಚಿತವಾಗಲಿದೆ.
ಎರಡೂ ತಂಡಗಳಿಗೂ ಇದು ಮಹತ್ವದ ಪಂದ್ಯವಾಗಿದ್ದು, ಗೆದ್ದ ತಂಡ ಪ್ಲೇ-ಆಫ್ ಸುತ್ತಿಗೆ ಆಯ್ಕೆಯಾಗಲಿದ್ದು, ಸೋತವರಿಗೆ ರನ್ರೇಟ್ ನಿರ್ಣಾಯಕ ಪಾತ್ರ ವಹಿಸಲಿದೆ. ಅಲ್ಲದೇ ಸೋತ ತಂಡದ ಹಣೆ ಬರಹ ಹೈದರಾಬಾದ್ ತಂಡದ ಸೋಲು ಅಥವಾ ಗೆಲುವಿನ ಮೇಲೆ ನಿರ್ಧಾರವಾಗಲಿದೆ.
ಆರಂಭದಲ್ಲಿ ಉತ್ತಮ ಪ್ರದರ್ಶನ ತೋರಿದ್ದ ಡೆಲ್ಲಿ ಸತತ ನಾಲ್ಕು ಪಂದ್ಯಗಲ್ಲಿ ಸೋಲು ಕಂಡಿದ್ರೆ, ಬೆಂಗಳೂರು ತಂಡ ಹ್ಯಾಟ್ರಿಕ್ ಸೋಲು ಅನುಭವಿಸಿದೆ. ಅಸ್ಥಿರ ಪ್ರದರ್ಶನವೇ ಇತ್ತಂಡಗಳಿಗೆ ಮುಳುವಾಗಿದೆ. ಹೀಗಾಗಿ ಇಂದಿನ ಪಂದ್ಯ ನಿರ್ಣಾಯಕವಾಗಲಿದೆ.
ಬೆಂಗಳೂರು ತಂಡದ ಆರಂಭಿಕ ಆಟಗಾರರ ಪಡಿಕ್ಕಲ್ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ, ಫಿಲಿಪ್ಪೆ ಕೂಡ ಕಳೆದ ಎರಡು ಪಂದ್ಯಗಳಲ್ಲಿ ಮಿಚಿದ್ದಾರೆ. ಆದರೆ ವಿರಾಟ್ ಮತ್ತು ವಿಲಿಯರ್ಸ್ ನಿರ್ಗಮನದ ನಂತರ ಇನ್ನಿಂಗ್ಸ್ ಕಟ್ಟುವ ಆಟಗಾರರಿಲ್ಲ. ಮಧ್ಯಮ ಕ್ರಮಾಂಕ ಬಲಿಷ್ಟವಾಗಿಲ್ಲದಿರುವುದೇ ತಂಡಕ್ಕೆ ಹಿನ್ನಡೆ ಉಂಟುಮಾಡಿದೆ.
ಆರ್ಸಿಬಿ ಬೌಲಿಂಗ್ ಪಡೆ ಕೂಡ ಡೆಲ್ಲಿಯಷ್ಟು ಉತ್ತಮವಾಗಿಲ್ಲ, ಮೋರಿಸ್ ಮತ್ತು ಚಹಾಲ್ ಮೇಲೆ ಹೆಚ್ಚು ಅವಲಂಬಿತವಾಗಿದೆ. ಸೈನಿ, ಸಿರಾಜ್, ಸುಂದರ್ ಇಂದಿನ ಪಂದ್ಯದಲ್ಲಿ ಮಿಂಚುವ ಅವಶ್ಯಕತೆ ಇದೆ.
ಆರಂಭದಲ್ಲಿ ಅಮೋಘ ಪ್ರದರ್ಶನ ತೋರಿದ್ದ ಡೆಲ್ಲಿ, ಕಪ್ ಗೆಲ್ಲುವ ಫೇವರಿಟ್ ತಂಡವಾಗಿತ್ತು. ಆದರೆ, ಅಂತಿಮ ಹಂತದಲ್ಲಿ ಸತತ ಸೋಲಿನಿಂದ ಕಂಗೆಟ್ಟು ಪ್ಲೇ - ಆಫ್ ಹಂತಕ್ಕೇರಲು ಹೆಣಗಾಡುತ್ತಿದೆ. ಬ್ಯಾಟ್ಸ್ಮನ್ಗಳ ವೈಫಲ್ಯ ತಂಡಕ್ಕೆ ದೊಡ್ಡ ತಲೆನೋವಾಗಿದೆ. ಕಗಿಸೊ ರಬಾಡ, ನೋರ್ಟ್ಜೆ, ಅಕ್ಷರ್ ಪಟೇಲ್, ಆರ್.ಅಶ್ವಿನ್, ಸ್ಟೋಯ್ನಿಸ್ ಬೌಲಿಂಗ್ನಲ್ಲಿ ಕಮಾಲ್ ಮಾಡಬೇಕಿದೆ.