ಅಬುಧಾಬಿ : ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದ ಬಳಿಕ ಮುಂಬೈ ಇಂಡಿಯನ್ಸ್ ನಾಯಕ ಕೀರನ್ ಪೊಲಾರ್ಡ್ ಪ್ರತಿಕ್ರಯಿಸಿದ್ದು, ರಾಯಲ್ಸ್ ತಂಡದ ಆಟಗಾರರು ಉತ್ತಮವಾಗಿ ಆಡಿದ್ದಾರೆ. ಎರಡನೇ ಇನ್ನಿಂಗ್ಸ್ನಲ್ಲಿ ಪಿಚ್ ಉತ್ತಮಗೊಂಡಿತ್ತು ಎಂದು ಅವರು ಹೇಳಿದ್ದಾರೆ.
ರಾಜಸ್ಥಾನ ತಂಡ, ಮುಂಬೈ ಇಂಡಿಯನ್ಸ್ ವಿರುದ್ಧ ಪಂದ್ಯದಲ್ಲಿ 196 ರನ್ ಗುರಿ ಬೆನ್ನಟ್ಟಿ ಎಂಟು ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತ್ತು. ಈ ಪಂದ್ಯದಲ್ಲಿ ಬೆನ್ ಸ್ಟೋಕ್ಸ್ ಶತಕ ಸಿಡಿಸಿ ಮಿಂಚಿದರೆ, ಸಂಜು ಸ್ಯಾಮ್ಸನ್ ಅರ್ಧ ಶತಕ ಸಿಡಿಸಿ ಗೆಲುವಿನ ರೂವಾರಿಗಳಾಗಿದ್ದರು. ಮುಂಬೈ ಇಂಡಿಯನ್ಸ್ ಪರ ಜೇಮ್ಸ್ ಪ್ಯಾಟಿನ್ಸನ್ 40 ರನ್ ನಿಡಿ 2 ವಿಕೆಟ್ ಪಡೆದಿದ್ದರು.
ಸ್ಟೋಕ್ಸ್ ಮತ್ತು ಸ್ಯಾಮ್ಸನ್ ಅಜೇಯ ಪಾಲುದಾರಿಕೆಯಿಂದ 152 ರನ್ ಗಳಿಸಿದರು. ಈ ಗೆಲುವಿನೊಂದಿಗೆ ರಾಜಸ್ಥಾನ್ ರಾಯಲ್ಸ್ ತಂಡ 10 ಅಂಕಗಳೊಂದಿಗೆ ಪಾಯಿಂಟ್ ಟೇಬಲ್‌ನಲ್ಲಿ ಆರನೇ ಸ್ಥಾನಕ್ಕೆ ತಲುಪಿದರೆ, ಮುಂಬೈ ಇಂಡಿಯನ್ಸ್ 14 ಅಂಕಗಳೊಂದಿಗೆ ಅಗ್ರ ಸ್ಥಾನದಲ್ಲಿದೆ.
"ನಮ್ಮ ತಂಡದ ಬ್ಯಾಟ್ಸಮನ್ಗಳು ಉತ್ತಮವಾಗಿಯೇ ಆಡಿದ್ದರು. ಅದರಲ್ಲೂ ಹಾರ್ದಿಕ್ ಅವರ ಆಟ ಉತ್ತಮವಾಗಿತ್ತು. ನಾವು ಎದುರಾಳಿ ತಂಡದ ಎರಡು ವಿಕೆಟ್ ಮಾತ್ರ ಪಡೆದವು, ಇನ್ನೂ ಎರಡು ವಿಕೆಟ್ ಪಡೆದಿದ್ದರೆ ಎದುರಾಳಿಗಳ ಮೇಲೆ ಒತ್ತಡ ಹಾಕಬಹುದಿತ್ತು. ಆದರೆ, ಎರಡನೇ ಇನ್ನಿಂಗ್ಸ್ನಲ್ಲಿ ಪಿಚ್ ಉತ್ತಮಗೊಂಡಿದ್ದರಿಂದ ನಮ್ಮ ಬೌಲರ್‌ಗಳು ಒತ್ತಡ ಹಾಕಲು ಸಾಧ್ಯವಾಗಲಿಲ್ಲ"ಎಂದು ಪೊಲಾರ್ಡ್ ಪಂದ್ಯದ ಮುಕ್ತಾಯದ ನಂತರ ಪ್ರತಿಕ್ರಯಿಸಿದ್ದಾರೆ.
"ದಿನದ ಕೊನೆಯಲ್ಲಿ, ಯಾರಾದರೂ ಗೆಲ್ಲುತ್ತಾರೆ, ಯಾರಾದರೂ ಸೋಲುತ್ತಾರೆ. ನಾವು ಉತ್ತಮ ಕ್ರಿಕೆಟ್ ಆಡಬೇಕಾಗಿದೆ. ನಮ್ಮ ಬೌಲರ್‌ಗಳು ಪ್ರಯತ್ನಿಸಿದರು. ಆದರೆ, ಎದುರಾಳಿ ತಂಡದವರು ಚೆನ್ನಾಗಿ ಆಡಿದರು ಎಂದರು.