ದುಬೈ : ಚೇಸಿಂಗ್ನಲ್ಲಿ ಅನುಭವಿಸಿದ ಬ್ಯಾಟಿಂಗ್ ವೈಫಲ್ಯವೇ ಆರ್ಸಿಬಿ ವಿರುದ್ಧದ ಸೋಲಿಗೆ ಕಾರಣ ಎಂದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅಭಿಪ್ರಾಯಪಟ್ಟಿದ್ದಾರೆ.
ಆರ್ಸಿಬಿ ವಿರುದ್ಧ 37 ರನ್ಗಳಿಂದ ಸೋಲನುಭವಿಸಿದ ಬಳಿಕ ಮಾತನಾಡಿದ ಎಂಎಸ್ಡಿ, ಬ್ಯಾಟಿಂಗ್ ವೈಫಲ್ಯತೆಯು ಸ್ವಲ್ಪ ಚಿಂತೆಗೀಡುಮಾಡಿದೆ. ಈ ಬಗ್ಗೆ ಕ್ರಮ ವಹಿಸುವುದು ಅಗತ್ಯವಾಗಿದೆ. ಅಲ್ಲದೆ ಬೌಲಿಂಗ್ನಲ್ಲಿ ಕೊನೆಯ ಓವರ್ಗಳಲ್ಲಿ ಉತ್ತಮ ನಿರ್ವಹಣೆ ಮೂಲಕ ಮುಕ್ತಾಯಗೊಳಿಸುವುದು ಪ್ರಮುಖವಾಗಿರುತ್ತದೆ ಎಂದಿದ್ದಾರೆ.
ದೊಡ್ಡ ಹೊಡೆತಗಳಿಗೆ ಯತ್ನಿಸಿ ಔಟ್ ಆಗಿದ್ದರೂ ಕೂಡ, ಅದರಲ್ಲಿ ಯಶಸ್ಸು ಸಾಧಿಸುವ ಬ್ಯಾಟಿಂಗ್ ಸಾಮರ್ಥ್ಯ ನಮ್ಮಲ್ಲಿದೆ. ಮುಂಬರುವ ಪಂದ್ಯಗಳಲ್ಲಿ ಅದನ್ನು ಸಾಬೀತು ಪಡಿಸುತ್ತೇವೆ. ಪ್ರತಿ ಪಂದ್ಯಾವಳಿಗಳಲ್ಲೂ ಕೂಡ ಇಲ್ಲಿಯವರೆಗೆ ಪ್ರದರ್ಶನ ಹೇಗಿತ್ತು ಎಂಬುದರ ಮೇಲೆ ಅದು ಅವಲಂಬಿತವಾಗಿರುತ್ತದೆ. ಆರನೇ ಓವರ್‌ನಿಂದ ನಮ್ಮ ಬ್ಯಾಟಿಂಗ್ ಶಕ್ತಿಯು ಸ್ವಲ್ಪ ಕುಂದುತ್ತಿದೆ ಎಂದು ಧೋನಿ ಹೇಳಿದ್ದಾರೆ.
ಒಟ್ಟಾರೆ ನೀವು ತಂಡದ ಸಂಯೋಜನೆಯನ್ನೂ ಗಮನಿಸಬೇಕಾಗುತ್ತದೆ. ಎಷ್ಟು ಸ್ಪಿನ್ನರ್‌ಗಳು, ವೇಗದ ಬೌಲರ್‌ಗಳನ್ನು ಆಡಸಬೇಕು ಎಂಬುದು ಮುಖ್ಯ ಪಾತ್ರ ವಹಿಸುತ್ತದೆ. ಐವರು ಬೌಲರ್‌ಗಳೊಂದಿಗೆ ಟೂರ್ನಿ ಆರಂಭಿಸಿದ್ದ ನಮ್ಮಲ್ಲಿ ಆರು ಜನರಿದ್ದಾರೆ. ಪ್ರಮುಖವಾಗಿ ಬ್ಯಾಟಿಂಗ್ ವಿಭಾಗವೇ ಚಿಂತೆಯಾಗಿದ್ದು, ಮುಂಬರುವ ಪಂದ್ಯಗಳಲ್ಲಿ ಈ ಬಗ್ಗೆ ಹೆಚ್ಚಿನ ಗಮನ ಹರಿಸಲಾಗುವುದು ಎಂದರು.
ಸಿಎಸ್‌ಕೆ ಮುಂದಿನ ಮಂಗಳವಾರ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಸೆಣಸಾಡಲಿದೆ.