ನವದೆಹಲಿ: ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಮತ್ತೋರ್ವ ಕನ್ನಡಿಗ ಸೇರ್ಪಡೆಗೊಂಡಿದ್ದಾನೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಹರ್ಷದ್ ಪಟೇಲ್ ಗಾಯಗೊಂಡ ಕಾರಣ ಅವರ ಸ್ಥಾನಕ್ಕೆ ಕನ್ನಡಿಗ ಜಗದೀಶ್ ಸುಚಿತ್ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.
25 ವರ್ಷದ ಕರ್ನಾಟಕದ ಎಡಗೈ ಸ್ಪಿನ್ನರ್ ಆಗಿರುವ ಜಗದೀಶ್ ಸುಚಿತ್ ಸೈಯದ್ ಮುಸ್ತಾಕ್ ಅಲಿ ಟಿ-20 ಟೂರ್ನಿಯಲ್ಲಿ 6.55 ಸರಾಸರಿಯಲ್ಲಿ ಬೌಲಿಂಗ್ ಮಾಡಿ 10 ವಿಕೆಟ್ ಕಬಳಿಸಿದ್ದರು. ಈಗಾಗಲೇ 2015 ಹಾಗೂ 2016ರಲ್ಲಿ ಮುಂಬೈ ಇಂಡಿಯನ್ಸ್ ಪರ 14 ಪಂದ್ಯಗಳನ್ನಾಡಿರುವ ಜಗದೀಶ್, 10 ವಿಕೆಟ್ ಪಡೆದುಕೊಂಡಿದ್ದರು. ಅದಾದ ಬಳಿಕ ಐಪಿಎಲ್ನಲ್ಲಿ ಅನ್ಸೋಲ್ಡ್ ಆಗಿ ಉಳಿದಿದ್ದರು.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ತಂಡದ ಕೋಚ್ ರಿಕಿ ಪಾಂಟಿಂಗ್, ಹರ್ಷದ್ ಪಟೇಲ್ ಗಾಯಗೊಂಡಿರುವ ಕಾರಣ ಅವರ ಸ್ಥಾನಕ್ಕೆ ಜಗದೀಶ್ ಸುಚಿತ್ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದ್ದಾರೆ.