ಮುಂಬೈ: ಕೋವಿಡ್ 19 ಕಾರಣದಿಂದ ಅರ್ಧಕ್ಕೆ ನಿಂತಿದ್ದ ಐಪಿಎಲ್ ಪುನಾರಂಭಕ್ಕೆ ಮುಹೂರ್ತ ನಿಗದಿಯಾಗಿದೆ. ಮುಂದೂಡಲ್ಪಟ್ಟಿದ್ದ 14ನೇ ಆವೃತ್ತಿಯ ಐಪಿಎಲ್ ಸೆಪ್ಟೆಂಬರ್ 19ರಂದು ಯುಎಇನಲ್ಲಿ ಪುನಾರಾರಂಭಗೊಳ್ಳಲಿದೆ. ಅಕ್ಟೋಬರ್ 15ರಂದು ಶ್ರೀಮಂತ ಕ್ರಿಕೆಟ್ ಲೀಗ್ ಫೈನಲ್ ಪಂದ್ಯ ನಡೆಯಲಿದೆ.
ಈ ಕುರಿತು ಮಾತನಾಡಿರುವ ಬಿಸಿಸಿಐ ಅಧಿಕಾರಿಯೊಬ್ಬರು 2021ರ ಉಳಿದ ಐಪಿಎಲ್ ಪಂದ್ಯಗಳು ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ನಡೆಯಲಿವೆ. ಇತ್ತೀಚೆಗೆ ಎಮಿರೇಟ್ಸ್ ಕ್ರಿಕೆಟ್ ಬೋರ್ಡ್ ಮತ್ತು ಬಿಸಿಸಿಐ ನಡೆಸಿದ ಸಭೆಯಲ್ಲಿ ದಿನಾಂಕ ನಿಗದಿಯಾಗಿದೆ. ಉಳಿದ 31 ಪಂದ್ಯಗಳನ್ನು ದುಬೈ, ಶಾರ್ಜಾ, ದುಬೈ ಮತ್ತು ಅಬುಧಾಬಿಯಲ್ಲಿ ಯಶಸ್ವಿಯಾಗಿ ನಡೆಸುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.
ಐಪಿಎಲ್ ಪುನಾರಂಭದ ಕುರಿತು ಚರ್ಚೆಗಳು ಉತ್ತಮವಾಗಿ ನಡೆದವು. ಬಿಸಿಸಿಐ ಸಾಮಾನ್ಯ ಸಭೆಗಿಂತ ಮುಂಚಿತವಾಗಿ ಪಂದ್ಯಾವಳಿಯನ್ನು ಆಯೋಜಿಸಲು ಇಸಿಬಿ ನಮಗೆ ಮೌಖಿಕ ಅನುಮತಿ ನೀಡಿತ್ತು, ಇದೀಗ ಕಳೆದ ವಾರದ ಒಪ್ಪಂದವನ್ನು ಕೂಡ ಮುಕ್ತಾಯಗೊಳಿಸಲಿದೆ. ಸೆಪ್ಟೆಂಬರ್ 19 ರಂದು ಐಪಿಎಲ್ 14ನೇ ಋತು ಪುನಾರಂಭವಾಗಲಿದೆ. ನಾವು ಅಕ್ಟೋಬರ್ 15 ರಂದು ಫೈನಲ್ ಪಂದ್ಯವನ್ನು ನಡೆಸುತ್ತೇವೆ. ಇನ್ನುಳಿದ 25 ದಿನಗಳ ಕಾಲಾವಕಾಶದಲ್ಲಿ ಉಳಿದ ಪಂದ್ಯಗಳನ್ನು ಮುಗಿಸಲು ಬಿಸಿಸಿಐ ಉತ್ಸುಕವಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.
ವಿದೇಶಿ ಆಟಗಾರರ ಲಭ್ಯತೆ ಬಗ್ಗೆ ಕೇಳಿದ್ದಕ್ಕೆ, ಕ್ರಿಕೆಟ್ ಮಂಡಳಿಗಳ ಜೊತೆಗೆ ಮಾತುಕತೆ ನಡೆಯುತ್ತಿದ್ದು, ಸಕಾರಾತ್ಮಕ ಪ್ರತಿಕ್ರಿಯೆಯ ನಿರೀಕ್ಷೆಯಲ್ಲಿದ್ದೇವೆ ಎಂದು ತಿಳಿಸಿದ್ದಾರೆ.
ಚರ್ಚೆಗಳು ಆರಂಭವಾಗಿವೆ. ನಾವು ಹೆಚ್ಚು ವಿದೇಶಿ ಆಟಗಾರರ ಲಭ್ಯತೆಗೆ ಪ್ರಯತ್ನಿಸುತ್ತಿದ್ದೇವೆ. ಒಂದು ವೇಳೆ ಸಾಧ್ಯವಾಗದಿದ್ದರೆ ನಂತರ ನಾವು ಮುಂದಿನ ಕ್ರಮದ ಬಗ್ಗೆ ಆಲೋಚಿಸುತ್ತೇವೆ. ಸದ್ಯಕ್ಕೆ ನಾವು ಯುಎಇಯಲ್ಲಿ 14 ನೇ ಆವೃತ್ತಿಯನ್ನು ಯಶಸ್ವಿಯಾಗಿ ಮುಗಿಸಲು ಆಶಿಸುತ್ತಿದ್ದೇವೆ ಎಂದಿದ್ದಾರೆ.
ಪ್ರಸ್ತುತ ಲೀಗ್ನಲ್ಲಿ 19 ಪಂದ್ಯಗಳು ಮುಗಿದಿದ್ದು, ಇನ್ನೂ ಪ್ಲೇ ಆಫ್ ಪಂದ್ಯಗಳು ಸೇರಿದಂತೆ ಒಟ್ಟು 31 ಪಂದ್ಯಗಳು ಪುನಾರಂಭದ ನಂತರ ನಡೆಯಬೇಕಿದೆ. 3-4 ವಾರಗಳಲ್ಲಿ ಟೂರ್ನಿ ಮುಗಿಸಲು ಬಿಸಿಸಿಐ ಚಿಂತಿಸುತ್ತಿದ್ದು, 10 ದಿನ 2 ಪಂದ್ಯಗಳನ್ನು ನಡೆಸಲು ಬಿಸಿಸಿಐ ತೀರ್ಮಾನಿಸಿದೆ ಎಂದು ಈ ಹಿಂದೆ ಪಿಟಿಐ ವರದಿ ಮಾಡಿತ್ತು. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ನಿಗದಿಯಂತೆ ಸೆಪ್ಟೆಂಬರ್ 14ರಂದು ಅಂತ್ಯಗೊಳ್ಳಲಿದೆ. ನಂತರ ಅಲ್ಲಿಂದ ಭಾರತೀಯ ಆಟಗಾರರೆಲ್ಲರೂ ಅತ್ಯಂತ ಸುರಕ್ಷಿತ ರೀತಿಯಲ್ಲಿ ದುಬೈ ತಲುಪಲಿದ್ದಾರೆ. ವಿಶ್ವಕಪ್ಗೂ ಮುನ್ನ ಪಾಕಿಸ್ತಾನ ಪ್ರವಾಸ ಕೈಗೊಳ್ಳಲಿರುವ ಇಂಗ್ಲೆಂಡ್ ತಂಡ ಐಪಿಎಲ್ನಲ್ಲಿ ಭಾಗವಹಿಸಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನು ಓದಿ: ಉಗ್ರರರನ್ನು 'ಹುತಾತ್ಮ' ಎಂದು ಸ್ಮರಿಸಿದ್ದಕ್ಕೆ ಟೀಕೆ: ತಪ್ಪಾಗಿದೆ ಕ್ಷಮಿಸಿ ಎಂದ ಹರ್ಭಜನ್