ನವದೆಹಲಿ : ತನ್ನ ವೃತ್ತಿ ಜೀವನದ ಮೊದಲ ಪಂದ್ಯದಲ್ಲಿ ಭಾರತ ಮಹಿಳಾ ತಂಡದ ಶೆಫಾಲಿ ವರ್ಮಾ ಇಂಗ್ಲೆಂಡ್ ವಿರುದ್ಧ 96 ರನ್ ಸಿಡಿಸಿ ಭರ್ಜರಿ ಆಟ ಪ್ರದರ್ಶಿಸಿದ್ದರು. ಈ ಕುರಿತು ಶೆಫಾಲಿ ವರ್ಮಾ ತಂದೆ ಸಂಜೀವ್ ವರ್ಮಾ ಮಾತನಾಡಿದ್ದು, ಮಗಳ ಸಾಧನೆ ಕುರಿತು ಸಂತಸ ಹಂಚಿಕೊಂಡಿದ್ದಾರೆ.
ನನಗೆ ಆಕೆಯ ಆಟದ ಕುರಿತು ಯಾವುದೇ ರೀತಿ ಆಶ್ಚರ್ಯವಾಗಿಲ್ಲ. ಆಕೆ ಹರಿಯಾಣ ರಾಜ್ಯಕ್ಕಾಗಿ ರಣಜಿ ಟ್ರೋಫಿ ಆಡುವ ಪುರುಷ ಕ್ರಿಕೆಟಿಗರ ಜೊತೆ ತರಬೇತಿ ಪಡೆದಿದ್ದಾಳೆ. ಅವರಲ್ಲಿ ಸುಮಾರು 135 ರಿಂದ 140 ಕಿ.ಮೀಟರ್ನಲ್ಲಿ ಬೌಲಿಂಗ್ ಮಾಡುತ್ತಿದ್ದರು. ಆದರೆ, ಮಹಿಳಾ ಕ್ರಿಕೆಟರ್ಗಳ ಬೌಲಿಂಗ್ ವೇಗ ಇಷ್ಟು ವೇಗ ಇರುವುದಿಲ್ಲ. ಅವಳು ಆಕ್ರಮಣಕಾರಿಯಾಗಿ ಆಡಲು ತರಬೇತಿ ಪಡೆದಿದ್ದಳು. ಹೀಗಾಗಿ, ಉತ್ತಮ ಪ್ರದರ್ಶನ ನೀಡುವ ನಂಬಿಕೆ ನನ್ನಲ್ಲಿತ್ತು ಎಂದಿದ್ದಾರೆ.
ಅಲ್ಲದೆ ನಾವು ಒಟ್ಟಿಗೆ ಅಭ್ಯಾಸ ಮಾಡುತ್ತಿದ್ದೆವು. ಬೆಳಗ್ಗೆ 11 ಗಂಟೆ ಸುಮಾರಿಗೆ ಮೈದಾನಕ್ಕೆ ಬಂದು ಆಕೆಯ ಸಹೋದರ ಸಾಹಿಲ್ ಜೊತೆಯಾಗಿ ಮೂವರು ಅಭ್ಯಾಸ ನಡೆಸುತ್ತಿದ್ದೆವು. ಪ್ರತಿಯೊಬ್ಬರು 6 ಬಾಲ್‌ಗಳನ್ನ ಎದುರಿಸಿ ಎಷ್ಟು ಸಿಕ್ಸ್ ಹೊಡೆಯುತ್ತೇವೆ ಎಂಬ ಅಭ್ಯಾಸ ಮಾಡುತ್ತಿದ್ದೆವು.
ಇದಕ್ಕಾಗಿ ಒಂದು ಸಿಕ್ಸ್ರ್ಗೆ 5 ರೂಪಾಯಿ ನೀಡುವ ಪಂಥ ಕಟ್ಟುತ್ತಿದ್ದೆವು. ಕೆಲವೊಮ್ಮೆ 10 ರೂಪಾಯಿ ಕಟ್ಟುತ್ತಿದ್ದೆವು. ಈಗ ಆಕೆ ಆಟ ನೋಡಿದರೆ ಈ ಅಭ್ಯಾಸ ಫಲ ನೀಡಿದಂತೆ ಕಾಣುತ್ತಿದೆ ಎಂದಿದ್ದಾರೆ. ಶೆಫಾಲಿ ವರ್ಮಾ ತಮ್ಮ ಪಾದಾರ್ಪಣೆ ಪಂದ್ಯದ ಒಂದೇ ಇನ್ನಿಂಗ್ಸ್ನಲ್ಲಿ 2 ಸಿಕ್ಸರ್ ಬಾರಿಸಿದ 3ನೇ ಮಹಿಳಾ ಕ್ರಿಕೆಟರ್ ಎನಿಸಿದರು.
ಓದಿ: WTC ಫೈನಲ್ ಪಂದ್ಯ: ಮಳೆಯಾಟಕ್ಕೆ ಮೊದಲ ದಿನದಾಟ ಸಂಪೂರ್ಣ ರದ್ದು