ಜೋಹಾನ್ಸ್‌ಬರ್ಗ್: ಕಿಲ್ಲರ್ ಕೊರೊನಾ ಹಿನ್ನೆಲೆ ಆಟಗಾರರ ಸುರಕ್ಷತಾ ದೃಷ್ಟಿಯಿಂದ ಸೃಷ್ಟಿಸಲಾಗಿರುವ ಬಯೋ ಬಬಲ್ ಬಗ್ಗೆ ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಕಗಿಸೊ ರಬಾಡಾ ತಮ್ಮ ಅಭಿಪ್ರಾಯವೊಂದನ್ನು ವ್ಯಕ್ತಪಡಿಸಿದ್ದಾರೆ.
ಬಯೋ ಬಬಲ್ನ ಅನುಭವವನ್ನು ಹಂಚಿಕೊಂಡಿರುವ ರಬಾಡಾ, ಇದೊಂದು "ಐಷಾರಾಮಿ ಕಾರಾಗೃಹ" ಇದ್ದಂತೆ ಎಂದು ಹೇಳಿದ್ದಾರೆ. ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ಸೀಮಿತ ಓವರ್‌ಗಳ ಸರಣಿ ಪ್ರಾರಂಭವಾಗಲಿವೆ. ಸುರಕ್ಷತಾ ದೃಷ್ಟಿಯಿಂದ ಆಟಗಾರರು ಕೇಪ್‌ಟೌನ್‌ನಲ್ಲಿನ ಬಯೋ ಬಬಲ್‌ನಲ್ಲಿ ಉಳಿದುಕೊಳ್ಳಲಿದ್ದಾರೆ. ಇನ್ನು ದುಬೈನಲ್ಲಿ 3 ತಿಂಗಳ ಕಾಲ ಬಯೋ ಬಬಲ್‌ನಲ್ಲಿ ಉಳಿದುಕೊಂಡಿದ್ದ ರಬಾಡಾ, ಡೆಲ್ಲಿ ಪರ ಮೈದಾನಕ್ಕಿಳಿದಿದ್ದರು.

ಇದೊಂದು ಸವಾಲಿನ ಕೆಲಸ. ಯಾರ ಜೊತೆಗೂ ಮಾತನಾಡುವಂತಿಲ್ಲ, ಸಂವಹನ ನಡೆಸುವಂತಿಲ್ಲ. ಇಲ್ಲಿ ನಮ್ಮ ಸ್ವಾತಂತ್ರ್ಯವನ್ನು ಸಹ ಪಕ್ಕಕ್ಕಿಡಬೇಕು. ನಿಜ ಹೇಳಬೇಕೆಂದರೆ ಇದೊಂತರಾ ಐಶಾರಾಮಿ ಜೈಲಿನಲ್ಲಿ ಇದ್ದಂತೆ. ಆದರೆ, ನಾವು ಅದೃಷ್ಠಶಾಲಿಗಳು ಎಂಬುದನ್ನು ನೆನಪಿಸಿಕೊಳ್ಳಬೇಕು. ಯಾಕೆಂದರೆ ಸಾಕಷ್ಟು ಜನರು ಕೆಲಸ ಕಳೆದುಕೊಂಡಿದ್ದಾರೆ. ಜೀವನ ನಿರ್ವಹಿಸಲು ಕಷ್ಟಪಡುತ್ತಿದ್ದಾರೆ. ಆದರೆ, ನಮಗೆ ಇಷ್ಟವಾದ ಆಟವನ್ನು ಆಡಿ ಸಂಬಾವನೆ ಪಡೆಯುವ ಅವಕಶ ದೊರೆತಿದೆ. ಈ ಉತ್ತಮ ಅವಕಾಶಕ್ಕಾಗಿ ನಾವು ಕೃತಜ್ಞರಾಗಿರಬೇಕು ಎಂದು ಕಗಿಸೋ ರಬಡಾ ವರ್ಚುವಲ್ ಸರಣಿಯಲ್ಲಿ ಹೇಳಿದ್ದಾರೆ.
ಶಿಸ್ತು ಬದ್ಧ ಹೋಟೆಲ್‌ಗಳಲ್ಲಿ ಇರುವುದರಿಂದ ಇಲ್ಲಿ ಹೇಗೆ ಬೇಕು ಹಾಗೆ ಇರುವಂತಿಲ್ಲ. ಒಳ್ಳೆಯ ಆಹಾರವನ್ನು ಪಡೆಯುತ್ತೇವೆ. ಆದರೆ, ಕ್ಯಾಂಡಿ ಅಂಗಡಿಯಲ್ಲಿ ಬೇಕಾದದ್ದನ್ನು ಪಡೆಯಲಾಗದ ಮಕ್ಕಳಂತಾಗಿದ್ದೇವೆ. ಯಾಕೆಂದರೆ ನಾಲ್ಕು ಗೋಡೆಗಳ ಮಧ್ಯೆಯೇ ನಾವಿರಬೇಕು. ಇದು ಮಾನಸಿಕವಾಗಿ ಕಠಿಣ ಸಂದರ್ಭವಾಗಿರುತ್ತದೆ. ಆದರೆ ನಾವು ಆಡಲು ಹೋದಾಗ ಇದೆಲ್ಲಾ ಕಷ್ಟಗಳು ನಮ್ಮಿಂದ ದೂರವಾಗುತ್ತದೆ. ನಮ್ಮನ್ನು ಮರೆಸುತ್ತದೆ ಎಂದಿದ್ದಾರೆ.

ಇದೇ ವೇಳೆ ಐಪಿಎಲ್ ಮತ್ತು ಅಂತಾರಾಷ್ಟ್ರೀಯ ಪಂದ್ಯದ ನಡುವಿನ ಗಾಂಭಿರ್ಯತೆ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
2015ರಲ್ಲಿ ಪಾದಾರ್ಪಣೆ ಮಾಡಿದಾಗಿನಿಂದ ಇಲ್ಲಿಯವರೆಗೆ 43 ಟೆಸ್ಟ್ ಪಂದ್ಯಗಳನ್ನು ಆಡಿದ ರಬಾಡಾ, ಇತ್ತೀಚಿನ ಐಪಿಎಲ್ ಸೀಸನ್ನಲ್ಲಿ ಮುಂಬೈ ವಿರುದ್ಧದ ಅಂತಿಮ ಪಂದ್ಯದಲ್ಲಿ ದೆಹಲಿ ಕ್ಯಾಪಿಟಲ್ಸ್ ಪರ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರನಾಗಿ ಹೊರಹೊಮ್ಮಿದ್ದಾರೆ.