ನವದೆಹಲಿ: ದೇಶದ ಕ್ರಿಕೆಟಿಗರು ರಾಷ್ಟ್ರೀಯ ಕಾರ್ಯಯೋಜನೆಗಳಿಗಿಂತ ಐಪಿಎಲ್‌ಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ ಎಂದು ಕಪಿಲ್ ದೇವ್ ಬೇಸರ ವ್ಯಕ್ತಪಡಿಸಿದ್ದಾರೆ.
ಐಸಿಸಿ ಟಿ20 ವಿಶ್ವಕಪ್‌ನ ಸೂಪರ್ 12ರಲ್ಲಿ ನ್ಯೂಜಿಲೆಂಡ್ ವಿರುದ್ಧ ಅಫ್ಘಾನಿಸ್ತಾನ ನಿನ್ನೆ ಸೋತ ಪರಿಣಾಮ ಟೀಂ ಇಂಡಿಯಾ ಸೆಮಿಫೈನಲ್ ಪ್ರವೇಶಿಸುವ ಅವಕಾಶವನ್ನು ಕಳೆದುಕೊಂಡಿದೆ. ಇದೇ ವಿಚಾರವಾಗಿ ಪ್ರತಿಕ್ರಿಯಿಸಿರುವ ಅವರು, ಯುಎಇನಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಸಮಯದಲ್ಲಿ ಮಾಡಿದ ತಪ್ಪುಗಳನ್ನು ಮರುಕಳಿಸದಂತೆ ಉತ್ತಮ ವೇಳಾಪಟ್ಟಿ ಸಿದ್ಧಪಡಿಸುವ ಜವಾಬ್ದಾರಿ ಬಿಸಿಸಿಐ ಮೇಲಿದೆ ಎಂದು ಹೇಳಿದ್ದಾರೆ.
ಆಟಗಾರರು ದೇಶಕ್ಕಾಗಿ ಆಡುವುದಕ್ಕಿಂತ ಐಪಿಎಲ್‌ಗೆ ಆದ್ಯತೆ ನೀಡಿದಾಗ ನಾವು ಏನು ಹೇಳಬಹುದು? ಆಟಗಾರರು ತಮ್ಮ ರಾಷ್ಟ್ರಕ್ಕಾಗಿ ಆಡುವುದರಲ್ಲಿ ಹೆಮ್ಮೆ ಪಡಬೇಕು. ಅವರ ಆರ್ಥಿಕ ಸ್ಥಿತಿ ನನಗೆ ತಿಳಿದಿಲ್ಲ. ಆದ್ದರಿಂದ ಹೆಚ್ಚು ಹೇಳಲಾರೆ ಎಂದು ಮಾಜಿ ನಾಯಕ ರಾಷ್ಟ್ರೀಯ ಸುದ್ದಿಸಂಸ್ಥೆಗೆ ತಿಳಿಸಿದರು.
'ಐಪಿಎಲ್, ಟಿ20 ವಿಶ್ವಕಪ್ ನಡುವೆ ಅಂತರ ಬೇಕಿತ್ತು'
ಇದೇ ವೇಳೆ, ಐಪಿಎಲ್ ಮತ್ತು ಟಿ20 ವಿಶ್ವಕಪ್ ನಡುವೆ ಸ್ವಲ್ಪ ಅಂತರ ಇರಬೇಕಿತ್ತು ಎಂದು ಕಪಿಲ್ ಅಭಿಪ್ರಾಯಪಟ್ಟಿದ್ದಾರೆ.
ನಮ್ಮ ಆದ್ಯತೆಯ ಮೊದಲ ಸಾಲಿನಲ್ಲಿ ದೇಶದ ತಂಡ ಹಾಗೂ ನಂತರ ಫ್ರಾಂಚೈಸಿಗಳು ಇರಬೇಕು ಎಂದು ಭಾವಿಸುತ್ತೇನೆ. ಐಪಿಎಲ್‌ನಲ್ಲಿ ಆಡಬೇಡಿ ಎಂದು ನಾನು ಹೇಳುತ್ತಿಲ್ಲ, ಆದರೆ ಕ್ರಿಕೆಟ್ ಅನ್ನು ಉತ್ತಮವಾಗಿ ಯೋಜಿಸುವ ಜವಾಬ್ದಾರಿ ಈಗ ಬಿಸಿಸಿಐ ಮೇಲಿದೆ. ಈ ಪಂದ್ಯಾವಳಿಯಲ್ಲಿ ನಾವು ಮಾಡಿದ ತಪ್ಪುಗಳು ಮುಂದೆ ಪುನರಾವರ್ತಿಸದಂತೆ ನೋಡಿಕೊಳ್ಳುವುದು ನಮಗೆ ದೊಡ್ಡ ಕಲಿಕೆಯಾಗಿದೆ. ಇದು ಭವಿಷ್ಯವನ್ನು ನೋಡುವ ಸಮಯ. ನೀವು ಈಗಿನಿಂದಲೇ ಯೋಜನೆಯನ್ನು ಪ್ರಾರಂಭಿಸಬೇಕು ಎಂದು ಕಪಿಲ್ ದೇವ್ ಸಲಹೆ ನೀಡಿದ್ದಾರೆ.