ಇಸ್ಲಾಮಾಬಾದ್(ಪಾಕಿಸ್ತಾನ): ಕ್ರಿಕೆಟ್ನಲ್ಲಿ ಹಣ ಅತ್ಯಂತ ಪ್ರಮುಖ ಆಟಗಾರನಾಗಿದ್ದು, ಭಾರತ ಕ್ರಿಕೆಟ್ ಅನ್ನು ನಿಯಂತ್ರಿಸುತ್ತಿದೆ. ನ್ಯೂಜಿಲ್ಯಾಂಡ್ ಮತ್ತು ಇಂಗ್ಲೆಂಡ್ನಂಥಹ ರಾಷ್ಟ್ರಗಳಿಗೂ ಇಂಡಿಯಾದೊಂದಿಗಿನ ಸರಣಿಗಳನ್ನು ರದ್ದು ಮಾಡುವ ಧೈರ್ಯವಿಲ್ಲ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.
ರಕ್ಷಣೆಯ ಕಾರಣ ನೀಡಿ ನ್ಯೂಜಿಲ್ಯಾಂಡ್ ಕ್ರಿಕೆಟ್ ತಂಡ ಪಾಕಿಸ್ತಾನದೊಂದಿಗೆ ಪಂದ್ಯಗಳನ್ನು ರದ್ದು ಮಾಡಿಕೊಂಡ ಬೆನ್ನಲ್ಲೇ ಇಂಗ್ಲೆಂಡ್ ತಂಡವೂ ಕೂಡಾ ಪಾಕಿಸ್ತಾನ ಪ್ರವಾಸವನ್ನು ರದ್ದು ಮಾಡಿತ್ತು. ಈ ಕುರಿತು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕರೂ ಆಗಿರುವ ಇಮ್ರಾನ್ ಖಾನ್ ಈ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮಿಡಲ್ ಈಸ್ಟ್ ಐ (Middle East Eye) ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಇಮ್ರಾನ್ ಖಾನ್ ಈ ಅಭಿಪ್ರಾಯವನ್ನು ಹೊರಹಾಕಿದ್ದಾರೆ. ಪ್ರಸ್ತುತ ಆಟಗಾರರಿಗೆ ಮತ್ತು ಕ್ರಿಕೆಟ್ ಮಂಡಳಿಗಳಿಗೆ ಹಣ ಅತ್ಯಂತ ಪ್ರಮುಖ ಆಟಗಾರ. ಭಾರತದಲ್ಲಿ ಹಣವಿದೆ. ಇದರಿಂದಾಗಿಯೇ ಕ್ರಿಕೆಟ್ ಅನ್ನು ಭಾರತ ನಿಯಂತ್ರಿಸುತ್ತಿದೆ. ಅವರು ಏನು ಹೇಳುತ್ತಾರೆಯೋ ಅದೇ ನಡೆಯುತ್ತದೆ. ಭಾರತದ ವಿರುದ್ಧ ಯಾರೂ ಧೈರ್ಯ ತೋರುವುದಿಲ್ಲ ಎಂದಿದ್ದಾರೆ.
ನ್ಯೂಜಿಲ್ಯಾಂಡ್ ಮತ್ತು ಇಂಗ್ಲೆಂಡ್ ಪಾಕಿಸ್ತಾನದೊಂದಿಗೆ ತನ್ನ ಕ್ರಿಕೆಟ್ ಪ್ರವಾಸವನ್ನು ರದ್ದುಮಾಡಿಕೊಂಡ ಬೆನ್ನಲ್ಲೇ ಪಾಕಿಸ್ತಾನದ ಕೆಲವು ಸಚಿವರು ಮತ್ತು ಮಾಜಿ ಕ್ರಿಕೆಟಿಗರು ತಮ್ಮ ಅಸಮಾಧಾನವನ್ನು ಹೊರಹಾಕಿದ್ದು, ಭಾರತದ ವಿರುದ್ಧ ಕಿಡಿಕಾರಿದ್ದಾರೆ. ಈಗ ಅವರ ಸಾಲಿಗೆ ಪಾಕ್ ಪ್ರಧಾನಿಯೂ ಸೇರಿಕೊಂಡಿದ್ದಾರೆ.
ಬಿಸಿಸಿಐ ಹೇಳಿದ್ದು..
ಪಾಕ್ನ ಹಲವು ಸಚಿವರು ಮತ್ತು ಕ್ರಿಕೆಟಿಗರು ಈ ರೀತಿಯ ಪ್ರತಿಕ್ರಿಯೆ ನೀಡುವುದಕ್ಕೆ ಪ್ರತ್ಯುತ್ತರ ನೀಡಿದ್ದ ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಪಾಕ್ ಎಲ್ಲಾ ಚಿಕ್ಕ ಮತ್ತು ದೊಡ್ಡ ವಿಷಯಗಳಿಗೆ ಭಾರತದ ಹೆಸರನ್ನು ಬಳಸಿಕೊಳ್ಳುತ್ತದೆ. ಅದಕ್ಕೆ ಯಾವುದೇ ಪುರಾವೆಗಳು ಕೂಡಾ ಇರುವುದಿಲ್ಲ. ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್ಗಳೊಂದಿಗೆ ಕ್ರಿಕೆಟ್ ಪಂದ್ಯಗಳು ರದ್ದಾದ ವಿಚಾರದಲ್ಲಿ ಭಾರತದ ಪಾತ್ರ ಏನೂ ಇಲ್ಲ ಎಂದು ಐಎಎನ್ಎಸ್ಗೆ ಸ್ಪಷ್ಟನೆ ನೀಡಿದ್ದಾರೆ.
ಇದರ ಜೊತೆಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಹೊಸದಾಗಿ ಆಯ್ಕೆಯಾಗಿರುವ ರಮೀಜ್ ರಾಜಾ ಅವರು ಪಾಕಿಸ್ತಾನ ಕ್ರಿಕೆಟ್ ಅನ್ನು ಮತ್ತಷ್ಟು ಬಲಪಡಿಸಲಿ ಎಂದು ಬಿಸಿಸಿಐ ಹಿರಿಯ ಅಧಿಕಾರಿ ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ತನ್ನ ಮಗುವಿಗೆ ತಂದೆ ಯಾರೆಂಬುದಕ್ಕೆ ಸುಳಿವು ನೀಡಿದ್ರು ಟಿಎಂಸಿ ಸಂಸದೆ ನುಸ್ರತ್ ಜಹಾನ್