ಕರಾಚಿ: ನನ್ನ ನಿವೃತ್ತಿಯ ಬಗ್ಗೆ ಮಾಧ್ಯಮಗಳಲ್ಲಿ ಭಾರಿ ಚರ್ಚೆಯಾಗುತ್ತಿದೆ. ಇದು ದೂರದ ಮಾತು. ಸದ್ಯಕ್ಕೆ ನಾನು ಕ್ರಿಕೆಟ್ನಿಂದ ನಿವೃತ್ತಿ ತೆಗೆದುಕೊಳ್ಳುವ ಯಾವುದೇ ಉದ್ದೇಶವನ್ನು ಇಟ್ಟುಕೊಂಡಿಲ್ಲ ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶೋಯೆಬ್ ಮಲಿಕ್ ಸ್ಪಷ್ಟಪಡಿಸಿದ್ದಾರೆ.
ನನ್ನ ನಿವೃತ್ತಿಯ ಬಗ್ಗೆ ನಾನು ಈವರೆಗೂ ಯೋಚಿಸಿಲ್ಲ. ಸದ್ಯಕ್ಕೆ ಆ ಯೋಚನೆಯೂ ನನ್ನಲ್ಲಿಲ್ಲ. ಇದಕ್ಕೆ ಕಾರಣ ನನ್ನ ಫಿಟ್ನೆಸ್. ಮೈದಾನಕ್ಕೆ ಇಳಿದರೆ ನಾನು ಅಚ್ಚುಕಟ್ಟಾಗಿ ಬ್ಯಾಟ್ ಬೀಸುತ್ತೇನೆ. ಬೌಲಿಂಗ್ನಲ್ಲಿ ಉತ್ತಮ ಫಾರ್ಮ್ ಹೊಂದಿದ್ದೇನೆ. ಕ್ರಿಕೆಟ್ ಅಂಗಳದಲ್ಲಿ ಸಲೀಸಾಗಿ ಓಡಾಡುವಂತಹ ದೈಹಿಕ ಸಾಮರ್ಥ್ಯವನ್ನು ನಾನು ಈಗಲೂ ಹೊಂದಿದ್ದೇನೆ. ಹಾಗಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ತೆಗೆದುಕೊಳ್ಳುವುದು ಸದ್ಯಕ್ಕೆ ದೂರದ ಮಾತು ಎಂದಿದ್ದಾರೆ.
ಇದನ್ನೂ ಓದಿ: ಕೊರೊನಾ ಸಂದಿಗ್ಧ ಪರಿಸ್ಥಿತಿಯಲ್ಲಿ ಐಪಿಎಲ್ ಟೂರ್ನಿ ಬೇಕಾ!? ಟಿಎಂಸಿ ಸಂಸದೆ ಪ್ರಶ್ನೆ
ವಿಶ್ವಕಪ್ ನಂತರ ಶೋಯೆಬ್ ಮಲಿಕ್ ನಿವೃತ್ತಿ ತೆಗೆದುಕೊಳ್ಳಲಿದ್ದಾರೆ ಎಂಬ ಗಾಳಿ ಸುದ್ದಿಗೆ ಶುಕ್ರವಾರ ಕರಾಚಿಯಲ್ಲಿ ಮಾಧ್ಯಮವೊಂದರ ಸಂದರ್ಶನಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಕೆಲವು ಲೀಗ್‌ಗಳನ್ನು ಆಡುವ ಸಲುವಾಗಿ ಎರಡು ವರ್ಷಗಳ ಒಪ್ಪಂದಗಳಿಗೆ ಇತ್ತೀಚೆಗೆ ಸಹಿ ಹಾಕಿದ್ದೇನೆ. ಇದರಿಂದ ನಿವೃತ್ತಿ ತೆಗೆದುಕೊಳ್ಳುವ ಪ್ರಶ್ನೆ ಎಲ್ಲಿಂದ ಹುಟ್ಟುತ್ತೆ? ನಾನು ಹಾಟ್‌ಸ್ಪಾಟ್‌ಗಳಲ್ಲಿ ಫೀಲ್ಡಿಂಗ್ ಮಾಡುತ್ತೇನೆ. ತಂಡಕ್ಕೆ ಎರಡು ರನ್ ಹೆಚ್ಚು ತಂದುಕೊಡಬಲ್ಲೆ. ಎದುರಾಳಿ ತಂಡ ಎರಡು ರನ್ಗಳನ್ನು ಕದಿಯುವುದನ್ನು ನಾನು ತಡೆಯಬಲ್ಲೆ. ಬೌಲಿಂಗ್ ಹಾಗೂ ಬ್ಯಾಟಿಂಗ್ ಚೆನ್ನಾಗಿ ಮಾಡುತ್ತಿದ್ದೇನೆ ಎಂದು ತಮ್ಮ ಫಿಟ್ನೆಸ್ ಬಗ್ಗೆ ಮಾಹಿತಿ ನೀಡಿದರು.
ಟೆಸ್ಟ್ ಮತ್ತು ಏಕದಿನ ಪಂದ್ಯಗಳಿಂದ ನಿವೃತ್ತಿ ಪಡೆದ ಮಲಿಕ್ ಈಗ ಟಿ-20 ಯಲ್ಲಿ ಮಾತ್ರ ಆಡುತ್ತಿದ್ದಾರೆ. ಮುಖ್ಯ ತರಬೇತುದಾರ ಮಿಸ್ಬಾ - ಉಲ್-ಹಕ್ ಬ್ಯಾಟಿಂಗ್ ಕ್ರಮದಲ್ಲಿ ಹಲವಾರು ಹೊಸ ಆಟಗಾರರನ್ನು ಕಣಕ್ಕಿಳಿಸುತ್ತಿರುವುದದರಿಂದ ಕಳೆದ ವರ್ಷದಿಂದ ಮಲಿಕ್ ತಂಡದಿಂದ ಹೊರಗುಳಿದಿದ್ದಾರೆ.
ಅನುಭವಿ ಆಲ್‌ರೌಂಡರ್ ಆಗಿರುವ ಶೋಯಬ್ ಮಲಿಕ್ ಪಾಕ್ ಪರ 35 ಟೆಸ್ಟ್, 287 ಏಕದಿನ ಮತ್ತು 116 ಟಿ-20 ಪಂದ್ಯಗಳಲ್ಲಿ ಆಡಿದ್ದಾರೆ.