ಕ್ವೀನ್ಸ್ಟೌನ್( ನ್ಯೂಜಿಲ್ಯಾಂಡ್): ಭಾರತ ಮತ್ತು ನ್ಯೂಜಿಲ್ಯಾಂಡ್ ವನಿತೆಯರ ತಂಡದ ನಡುವಿನ 5 ಏಕದಿನ ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ಗೆಲುವು ಸಾಧಿಸಿದೆ. ನ್ಯೂಜಿಲ್ಯಾಂಡ್ ತಂಡದ ಸಂಘಟಿತ ಪ್ರದರ್ಶನವು ಭಾರತದ ವಿರುದ್ಧ 62 ರನ್ಗಳ ಗೆಲುವನ್ನು ಸಾಧಿಸಲು ಸಹಕಾರಿಯಾಗಿದೆ.
ಶನಿವಾರ ಕ್ವೀನ್ಸ್ಟೌನ್ನಲ್ಲಿ ನಡೆದ ಕ್ರಿಕೆಟ್ ಪಂದ್ಯಾಟದಲ್ಲಿ ನ್ಯೂಜಿಲ್ಯಾಂಡ್ ಮಹಿಳಾ ತಂಡವು ಮೊದಲು ಬ್ಯಾಟಿಂಗ್ ಮಾಡಿತು. ನ್ಯೂಜಿಲ್ಯಾಂಡ್ ಪರ ಬ್ಯಾಟಿಂಗ್ಗೆ ಇಳಿದ ಸೂಝಿ ಬೇಟ್ಸ್ 106 ರನ್ಗಳ ಅಮೋಘ ಶತಕದ ಬ್ಯಾಟಿಂಗ್ ಪ್ರದರ್ಶನ ಮತ್ತು ಸಾತರ್ ವೈಟ್ (65 ರನ್) ಅರ್ಧಶತಕದ ನೆರವಿಂದ ತಂಡವು ಸವಾಲಿನ ಮೊತ್ತವನ್ನು ಗಳಿಸಲು ಶಕ್ತವಾಯಿತು. ಅಂತಿಮವಾಗಿ ನ್ಯೂಜಿಲ್ಯಾಂಡ್ ತಂಡವು 48.1 ಓವರ್ಗಳಲ್ಲಿ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡು 275 ರನ್ ಗಳ ಗುರಿಯನ್ನು ಭಾರತಕ್ಕೆ ನೀಡಿತು.
ನಂತರ ಬ್ಯಾಟಿಂಗ್ ಮಾಡಿದ ಭಾರತೀಯ ತಂಡವು 49.4 ಒವರ್ಗಳಲ್ಲಿ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡು 213 ರನ್ ಗಳಿಸಿ ಸೋಲನ್ನು ಅನುಭವಿಸಿತು. ಭಾರತದ ಪರ ಮಿಥಾಲಿ ರಾಜ್ 59 ರನ್, ಯಾಶಿಕಾ ಭಾಟಿಯಾ 41 ರನ್ ಗಳಿಸಿದರು. ಜೆಸ್ ಅವರ ಉತ್ತಮ ಬೌಲಿಂಗ್ ದಾಳಿಗೆ ಭಾರತ ತಂಡವು ಕುಸಿಯಿತು. ಈ ಮೂಲಕ ನ್ಯೂಜಿಲ್ಯಾಂಡ್ ತಂಡವು ಸರಣಿಯಲ್ಲಿ ಗೆಲುವಿನ ಖಾತೆಯನ್ನು ತೆರೆದಿದೆ.