ಮುಂಬೈ: ಭಾರತ ತಂಡದ ಆರಂಭಿಕ ಆಟಗಾರ್ತಿ ಶೆಫಾಲಿ ವರ್ಮಾ ಬಿಸಿಸಿಐ ಆಯೋಜಿಸುವ ಮಹಿಳಾ ಟಿ20 ಟ್ರೋಫಿಯಲ್ಲಿ ಭರ್ಜರಿ ಪ್ರದರ್ಶನ ತೋರುತ್ತಿದ್ದಾರೆ. ಲೀಗ್ನಲ್ಲಿ ಆಡಿರುವ 6 ಪಂದ್ಯಗಳಲ್ಲಿ 5 ರಲ್ಲಿ ಅರ್ಧಶತಕ ಸಿಡಿಸಿ ತಂಡವನ್ನು ಕ್ವಾರ್ಟರ್ ಫೈನಲ್ ಪ್ರವೇಶಿಸಲು ನೆರವಾಗಿದ್ದಾರೆ. ಹಿರಿಯ ಮಹಿಳಾ ಟಿ20 ಲೀಗ್ನಲ್ಲಿ ಹರಿಯಾಣ ತಂಡವನ್ನು ಮುನ್ನಡೆಸುತ್ತಿರುವ ಶೆಫಾಲಿ ವರ್ಮಾ 6 ಪಂದ್ಯಗಳಿಂದ 301 ರನ್ಗಳಿಸಿ ಅಬ್ಬರಿಸಿದ್ದಾರೆ. ಇದರಲ್ಲಿ 5 ಅರ್ಧಶತಕಗಳು ಸೇರಿವೆ.
ಶೆಫಾಲಿ ಪಂಜಾಬ್ ವಿರುದ್ಧದ ಮೊದಲ ಪಂದ್ಯದಲ್ಲಿ 23 ಎಸೆತಗಳಲ್ಲಿ 50 ರನ್ ಚಚ್ಚಿದ್ದರು. ಸೌರಾಷ್ಟ್ರ ವಿರುದ್ಧ 29 ಎಸೆತಗಳಲ್ಲಿ 51, ಬೆಂಗಾಲ್ ವಿರುದ್ಧ 46 ಎಸೆತಗಳಲ್ಲಿ ಅಜೇಯ 75, ಅಸ್ಸಾಂ ವಿರುದ್ಧ 29 ಎಸೆತಗಳಲ್ಲಿ 58, ಜಾರ್ಖಂಡ್ ವಿರುದ್ಧ 33 ಎಸೆತಗಳಲ್ಲಿ ಅಜೇಯ 65 ರನ್ಗಳಿಸಿದ್ದಾರೆ. ಆಡಿರುವ 6 ಪಂದ್ಯಗಳಲ್ಲಿ ಮುಂಬೈ ವಿರುದ್ಧ ಮಾತ್ರ ಕೇವಲ 2 ರನ್ಗಳಿಗೆ ವಿಕೆಟ್ ಒಪ್ಪಿಸಿದ್ದರು. ಈ ಪಂದ್ಯದಲ್ಲಿ ಮಾತ್ರ ಹರಿಯಾಣ ಸೋಲು ಕಂಡಿದೆ.
ಬ್ಯಾಟಿಂಗ್ನಲ್ಲಿ ತಂಡಕ್ಕೆ ನೆರವಾಗುವುದಲ್ಲದೆ, ಬೌಲಿಂಗ್ನಲ್ಲಿ ಶೆಫಾಲಿ ಕಮಾಲ್ ಮಾಡುತ್ತಿದ್ದಾರೆ. ಉತ್ತಮ ಎಕಾನಮಿಯೊಂದಿಗೆ 4 ವಿಕೆಟ್ ಕೂಡ ಪಡೆದಿದ್ದಾರೆ. ಹರಿಯಾಣ ತಂಡ ಕ್ವಾರ್ಟರ್ ಫೈನಲ್ನಲ್ಲಿ ಒಡಿಶಾ ತಂಡವನ್ನು ಎದುರಿಸಲಿದೆ. ಕ್ವಾರ್ಟರ್ ಫೈನಲ್ನಲ್ಲಿ ಮಹಾರಾಷ್ಟ್ರ ತಂಡ ಹಿಮಾಚಲ ಪ್ರದೇಶ ವಿರುದ್ಧ, ರೈಲ್ವೇಸ್ ತಂಡ ಕೇರಳ ವಿರುದ್ಧ, ಬರೋಡ ವಿರುದ್ಧ ಮುಂಬೈ ತಂಡ ಸೆಣಸಾಡಲಿದೆ. 29ರಂದು ಮೊದಲ ಕ್ವಾರ್ಟರ್ ಫೈನಲ್ ನಡೆದರೆ, 30 ರಂದು ಉಳಿದ ಮೂರು ಕ್ವಾರ್ಟರ್ ಫೈನಲ್ ಪಂದ್ಯಗಳು ಜರುಗಲಿವೆ. ಮೇ 2 ರಂದು ಸೆಮಿಫೈನಲ್ಸ್ ಮತ್ತು ಮೇ 4ರಂದು ಫೈನಲ್ ಪಂದ್ಯ ನಡೆಯಲಿದೆ.
ಇದನ್ನೂ ಓದಿ: 76 ಬೌಂಡರಿ, 37 ಸಿಕ್ಸರ್! 414 ಎಸೆತಗಳಲ್ಲಿ 578 ರನ್ ಚಚ್ಚಿದ 21 ವರ್ಷದ ನೇಹಲ್ ವಡೇರಾ