ಹೋವ್(ಇಂಗ್ಲೆಂಡ್): ಇಂಗ್ಲೆಂಡ್ ಮಹಿಳಾ ತಂಡದ ವಿರುದ್ಧ ನಡೆದಿದ್ದ ಎರಡನೇ ಟಿ-20 ಪಂದ್ಯದಲ್ಲಿ ನಿಧಾನಗತಿ ಬೌಲಿಂಗ್ ಮಾಡಿದ್ದಕ್ಕಾಗಿ ಭಾರತ ಮಹಿಳಾ ತಂಡಕ್ಕೆ ದಂಡ ವಿಧಿಸಲಾಗಿದೆ. ಪಂದ್ಯದ ಸಂಭಾವನೆಯ ಶೇ. 20ರಷ್ಟು ದಂಡ ಹಾಕಿ ಐಸಿಸಿ ಆದೇಶ ಹೊರಹಾಕಿದೆ.
ಆತಿಥೇಯ ಇಂಗ್ಲೆಂಡ್ ವಿರುದ್ಧ ನಡೆದಿದ್ದ ಎರಡನೇ ಟಿ-20 ಪಂದ್ಯದಲ್ಲಿ ಭಾರತದ ವನಿತೆಯರು 8 ರನ್ಗಳ ರೋಚಕ ಗೆಲುವು ದಾಖಲು ಮಾಡಿದ್ದರು. ಆದರೆ ಈ ವೇಳೆ ನಿಧಾನಗತಿ ಬೌಲಿಂಗ್ ಮಾಡಿದ್ದಕ್ಕಾಗಿ ಹರ್ಮನ್ ಪ್ರೀತ್ ಕೌರ್ ಬಳಗಕ್ಕೆ ದಂಡ ವಿಧಿಸಲಾಗಿದೆ. ಐಸಿಸಿ ನೀತಿ ಸಂಹಿತೆ ಪ್ರಕಾರ ಪಂದ್ಯ ನಡೆದ ಸಂದರ್ಭದಲ್ಲಿ ತಂಡಕ್ಕೆ ನೀಡಿರುವ ಸಮಯದೊಳಗೆ ಓವರ್ ಮುಕ್ತಾಯಗೊಳಿಸಬೇಕು. ಇದರಲ್ಲಿ ವಿಫಲರಾದರೆ ದಂಡ ವಿಧಿಸಲಾಗುತ್ತದೆ.
ಎರಡನೇ ಟಿ-20 ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ತಂಡ ನಿಗದಿತ 20 ಓವರ್ಗಳಲ್ಲಿ 4ವಿಕೆಟ್ನಷ್ಟಕ್ಕೆ 148ರನ್ಗಳಿಕೆ ಮಾಡಿತ್ತು. ಇದರ ಬೆನ್ನತ್ತಿದ್ದ ಇಂಗ್ಲೆಂಡ್ ತಂಡ 20 ಓವರ್ಗಳಲ್ಲಿ 8ವಿಕೆಟ್ನಷ್ಟಕ್ಕೆ 140ರನ್ ಮಾತ್ರ ಗಳಿಸಲು ಶಕ್ತವಾಯಿತು.
ಇದನ್ನೂ ಓದಿರಿ: 44 ವರ್ಷದ ಮಹಿಳೆ ಮೇಲೆ ಅತ್ಯಾಚಾರ... ಪಂಜಾಬ್ MLA ವಿರುದ್ಧ ದೂರು
ಉಭಯ ತಂಡಗಳ ನಡುವೆ ಮೂರು ಟಿ-20 ಪಂದ್ಯಗಳ ಸರಣಿ ನಡೆಯುತ್ತಿದ್ದು, ಉಭಯ ತಂಡಗಳು ಈಗಾಗಲೇ 1-1ರಲ್ಲಿ ಗೆಲುವು ಸಾಧಿಸಿ ಸರಣಿ ಸಮಬಲ ಮಾಡಿಕೊಂಡಿವೆ. ನಾಳೆ ಅಂತಿಮ ಪಂದ್ಯ ನಡೆಯಲಿದ್ದು, ಇಲ್ಲಿ ಗೆಲುವು ಸಾಧಿಸುವ ತಂಡ ಪ್ರಶಸ್ತಿಗೆ ಮುತ್ತಿಕ್ಕಲಿದೆ.