ಮುಂಬೈ: ಶ್ರೀಲಂಕಾ ವಿರುದ್ಧದ 3 ಪಂದ್ಯಗಳ ಟಿ20 ಸರಣಿ ಆರಂಭವಾಗಲಿದೆ. ಹಾರ್ದಿಕ್ ಪಾಂಡ್ಯ ನೇತೃತ್ವದಲ್ಲಿ ಟೀಂ ಇಂಡಿಯಾ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಲಂಕಾ ತಂಡವನ್ನು ಎದುರಾಗಲಿದೆ. ಹಿರಿಯರ ಅನುಪಸ್ಥಿತಿಯಲ್ಲಿ ಯುವ ಆಟಗಾರರು ತಮ್ಮ ಸಾಮರ್ಥ್ಯ ಪ್ರದರ್ಶನ ಮಾಡಬೇಕಿದೆ. ದಸುನ್ ಶನಕಾ ನೇತೃತ್ವದ ಸಿಂಹಳೀಯರ ತಂಡ ಭಾರತದ ನೆಲದಲ್ಲಿ ಸರಣಿ ವಶಕ್ಕೆ ಸಜ್ಜಾಗಿದೆ.
ಟಿ20 ಸ್ಪೆಷಲಿಸ್ಟ್ ಬ್ಯಾಟರ್ ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಅರ್ಷದೀಪ್ ಸಿಂಗ್ ತಂಡಕ್ಕೆ ಮರಳಿದ್ದಾರೆ. ನ್ಯೂಜಿಲ್ಯಾಂಡ್ ವಿರುದ್ಧದ ಸರಣಿ ಗೆಲುವಿನ ಬಳಿಕ ಲಂಕಾ ದಹನಕ್ಕೆ ಆಟಗಾರರು ಸಜ್ಜಾಗಬೇಕಿದೆ. ವಿದೇಶಿ ನೆಲದಲ್ಲಿ ಮಿಂಚಿದ್ದ ಆಟಗಾರರು ಇನ್ನು ಮುಂದೆ ನಡೆಯುವ ತವರಿನ ನೆಲದಲ್ಲಿನ ಸರಣಿಗಳಲ್ಲಿ ಬ್ಯಾಟಿಂಗ್, ಬೌಲಿಂಗ್ ಸಾಮರ್ಥ್ಯ ತೋರಿಸಬೇಕಿದೆ.
ಮತ್ತೊಂದೆಡೆ, ಶ್ರೀಲಂಕಾದ ವನಿಂದು ಹಸರಂಗ ಡಿ ಸಿಲ್ವಾ, ಪಾತುಮ್ ನಿಸ್ಸಂಕ, ಕುಶಾಲ್ ಮೆಂಡಿಸ್ ಮತ್ತು ಮಹೇಶ್ ತೀಕ್ಷಣ ಸ್ಪಿನ್ ಅಸ್ತ್ರ ಹೂಡಲು ಮುಂದಾಗಿದ್ದಾರೆ. ಈವರೆಗಿನ ಎಲ್ಲ ಸರಣಿಗಳಲ್ಲಿ ಆಟಗಾರರು ಅದ್ಭುತ ಪ್ರದರ್ಶನ ನೀಡಿದ್ದು, ಉತ್ತಮ ಲಯದಲ್ಲಿದ್ದಾರೆ.
ಭಾರತ vs ಶ್ರೀಲಂಕಾ ಮುಖಾಮುಖಿ: ಇನ್ನು, ಭಾರತ ಮತ್ತು ಶ್ರೀಲಂಕಾ ನಡುವೆ ಒಟ್ಟು 26 ಪಂದ್ಯಗಳು ನಡೆದಿದ್ದು, ಇದರಲ್ಲಿ ಭಾರತ 17 ಪಂದ್ಯಗಳನ್ನು ಗೆದ್ದಿದ್ದರೆ, ಶ್ರೀಲಂಕಾ 8 ಪಂದ್ಯಗಳಲ್ಲಿ ವಿಜಯ ಸಾಧಿಸಿದೆ. ಒಂದು ಪಂದ್ಯ ಫಲಿತಾಂಶ ಕಂಡಿಲ್ಲ.
ತವರಿನಲ್ಲಿ ಭಾರತದ ಪ್ರದರ್ಶನ ಉತ್ತಮವಾಗಿದೆ. ಆಡಿದ 15 ಪಂದ್ಯಗಳ ಪೈಕಿ 11ರಲ್ಲಿ ಗೆದ್ದು, 3 ರಲ್ಲಿ ಸೋತಿದೆ. ಒಂದು ಪಂದ್ಯ ಫಲಿತಾಂಶ ಬಂದಿಲ್ಲ. ಉಭಯ ತಂಡಗಳ ಮಧ್ಯೆ ವಾಂಖೆಡೆಯಲ್ಲಿ ನಡೆದ ಪಂದ್ಯದಲ್ಲಿ ಭಾರತ 5 ವಿಕೆಟ್‌ಗಳಿಂದ ಗೆಲುವು ಸಾಧಿಸಿತ್ತು.
ಶುಭಮನ್ ಗಿಲ್ ಪದಾರ್ಪಣೆ: ಭಾರತ ಮತ್ತು ಶ್ರೀಲಂಕಾ ನಡುವಿನ ಪಂದ್ಯದಲ್ಲಿ ಶುಭಮನ್ ಗಿಲ್ ಪದಾರ್ಪಣೆ ಮಾಡುವ ಸಾಧ್ಯತೆ ಇದೆ. ಏಕದಿನದಲ್ಲಿ ಸಾಮರ್ಥ್ಯ ಪ್ರದರ್ಶಿಸಿರುವ ಗಿಲ್ ಟಿ20 ಯಲ್ಲಿ ಸ್ಥಾನ ಪಡೆದಿದ್ದಾರೆ. ಐಪಿಎಲ್ನಲ್ಲಿ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್ ಪರ ಆಡಿರುವ ಗಿಲ್ ಭಾರತದ ಪರವಾಗಿ 13 ಟೆಸ್ಟ್ ಪಂದ್ಯಗಳಲ್ಲಿ 736 ರನ್ ಹಾಗೂ 15 ಏಕದಿನ ಪಂದ್ಯಗಳಲ್ಲಿ 687 ರನ್ ಗಳಿಸಿದ್ದಾರೆ.
ವಾಂಖೆಡೆ ಪಿಚ್ ರಿಪೋರ್ಟ್: ವಾಂಖೆಡೆ ಪಿಚ್‌ನಲ್ಲಿ ಇದುವರೆಗೆ 7 ಟಿ20 ಪಂದ್ಯಗಳು ನಡೆದಿದ್ದು, ಈ ಪೈಕಿ ನಾಲ್ಕನ್ನು ಭಾರತ ಗೆದ್ದಿದೆ. 2 ಪಂದ್ಯ ಸೋತು ಒಂದು ಡ್ರಾ ಮಾಡಿಕೊಂಡಿದೆ. ಮೈದಾನದಲ್ಲಿ ಮೊದಲು ಬ್ಯಾಟ್ ಮಾಡಿದ ತಂಡ 2 ಪಂದ್ಯಗಳನ್ನು ಗೆದ್ದಿದ್ದರೆ, ನಂತರ ಬ್ಯಾಟಿಂಗ್ ಮಾಡಿ ರನ್ ಬೆನ್ನಟ್ಟಿದ ತಂಡ 5 ಬಾರಿ ಗೆಲುವು ಸಾಧಿಸಿದೆ. ಪಿಚ್ ಸ್ಪಿನ್ ಮತ್ತು ವೇಗದ ಬೌಲರ್‌ಗಳಿಗೆ ನೆರವಾಗಲಿದೆ. ಬ್ಯಾಟ್ಸ್‌ಮನ್‌ಗಳು ಸಹ ಇಲ್ಲಿ ರನ್ ಗಳಿಸಿದ್ದಾರೆ. ಟಾಸ್ ಕೂಡ ಮಹತ್ವ ಪಡೆಯಲಿದೆ.
ಪಂದ್ಯದ ಸಮಯ: ಮೊದಲ ಟಿ20 ಪಂದ್ಯ ಭಾರತೀಯ ಕಾಲಮಾನದ ಪ್ರಕಾರ ಸಂಜೆ 7 ಗಂಟೆಗೆ ನಡೆಯಲಿದೆ. ಸ್ಟಾರ್ ಸ್ಪೋರ್ಟ್ಸ್ 1 ವಿವಿಧ ಭಾಷೆಗಳು, ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ಪ್ರಸಾರವಾಗಲಿದೆ.
ಓದಿ: ಹಾರ್ದಿಕ್ ಪಾಂಡ್ಯ ಟಿ20 ನಾಯಕತ್ವ ಪಟ್ಟಕ್ಕೆ ಮಾಜಿ ಕ್ರಿಕೆಟಿಗನ ಆಕ್ಷೇಪ