ನವದೆಹಲಿ: 15ನೇ ಆವೃತ್ತಿ ಇಂಡಿಯನ್ ಪ್ರಿಮಿಯರ್ ಲೀಗ್ನಲ್ಲಿ ಮಾರಕ ಬೌಲಿಂಗ್ ಪ್ರದರ್ಶನ ನೀಡಿ, ಎಲ್ಲರ ಗಮನ ಸೆಳೆದಿರುವ ಟೀಂ ಇಂಡಿಯಾ ಸ್ಪಿನ್ನರ್ ಯಜುವೇಂದ್ರ ಚಹಲ್, ದಕ್ಷಿಣ ಆಫ್ರಿಕಾ ವಿರುದ್ಧದ ಟಿ-20 ಸರಣಿಯಲ್ಲಿ ಹೊಸದೊಂದು ಮೈಲಿಗಲ್ಲು ನಿರ್ಮಿಸಲು ಸಜ್ಜಾಗಿದ್ದಾರೆ.
ಕಳೆದ ವರ್ಷ ದುಬೈನಲ್ಲಿ ನಡೆದ ಟಿ20 ವಿಶ್ವಕಪ್ನಿಂದ ಹೊರಬಿದ್ದಿದ್ದ ಚಹಲ್, 2022ರ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಗಮನಾರ್ಹ ಪ್ರದರ್ಶನ ನೀಡುವ ಮೂಲಕ ಹೆಚ್ಚಿನ ವಿಕೆಟ್ ಕಬಳಿಸಿ, ಪರ್ಪಲ್ ಕ್ಯಾಪ್ ಗಿಟ್ಟಿಸಿಕೊಂಡಿದ್ದಾರೆ. ಇದರ ಬೆನ್ನಲ್ಲೇ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಅವರಿಗೆ ಅವಕಾಶ ಸಿಕ್ಕಿದೆ. ಈ ಟೂರ್ನಿಯಲ್ಲಿ ಕೇವಲ ಮೂರು ವಿಕೆಟ್ ಪಡೆದುಕೊಂಡರೆ, ಟಿ-20 ಕ್ರಿಕೆಟ್ನಲ್ಲಿ ಭಾರತದ ಬೌಲರ್ಗಳ ಪರ ಅತಿ ಹೆಚ್ಚು ವಿಕೆಟ್ ಪಡೆದುಕೊಂಡಿರುವ ಸಾಧನೆ ಅವರದ್ದಾಗಲಿದೆ.
ಇದನ್ನೂ ಓದಿ: ಹರಿಣಗಳ ವಿರುದ್ಧ ಟಿ-20 ಫೈಟ್.. ಕೋಚ್ ದ್ರಾವಿಡ್ ನೇತೃತ್ವದಲ್ಲಿ ಟೀಂ ಇಂಡಿಯಾ ಅಭ್ಯಾಸ
ಭಾರತದ ಪರ ಟಿ-20ಯಲ್ಲಿ ಸ್ಪಿನ್ನರ್ ಅಶ್ವಿನ್ 282 ಪಂದ್ಯಗಳಿಂದ 274 ವಿಕೆಟ್, ಚಹಲ್ 242 ಪಂದ್ಯಗಳಿಂದ 272 ವಿಕೆಟ್ ಪಡೆದುಕೊಂಡಿದ್ದು, ಉಳಿದಂತೆ ಪಿಯೂಷ್ ಚಾವ್ಲಾ 256 ಪಂದ್ಯಗಳಿಂದ 270 ವಿಕೆಟ್, ಅಮಿತ್ ಮಿಶ್ರಾ 236 ಪಂದ್ಯಗಳಿಂದ 262 ವಿಕೆಟ್ ಪಡೆದುಕೊಂಡಿದ್ದಾರೆ. ಇದೀಗ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಚಹಲ್ ಕೇವಲ ಮೂರು ವಿಕೆಟ್ ಪಡೆದುಕೊಂಡರೆ, ಅತಿ ಹೆಚ್ಚು ವಿಕೆಟ್ ಪಡೆದುಕೊಂಡಿರುವ ರೆಕಾರ್ಡ್ ಬರೆಯಲಿದ್ದಾರೆ. ಟಿ20 ಕ್ರಿಕೆಟ್ನಲ್ಲಿ ವೆಸ್ಟ್ ಇಂಡೀಸ್ನ ಡ್ವೇನ್ ಬ್ರಾವೋ 532 ಪಂದ್ಯಗಳಿಂದ 582 ವಿಕೆಟ್ ಪಡೆದುಕೊಂಡು, ಮೊದಲ ಸ್ಥಾನದಲ್ಲಿದ್ದಾರೆ.
ಭಾರತ-ದಕ್ಷಿಣ ಆಫ್ರಿಕಾ ನಡುವೆ ಜೂನ್ 9ರಿಂದ ಜೂನ್ 19ರವರೆಗೆ ಟಿ20 ಕ್ರಿಕೆಟ್ ಸರಣಿ ನಡೆಯಲಿದ್ದು, ಬಿಸಿಸಿಐ ಆಯ್ಕೆ ಸಮಿತಿ ಹೊಸ ಹೊಸ ಪ್ರತಿಭೆಗಳಿಗೆ ಮಣೆ ಹಾಕಿದೆ. ಈಗಾಗಲೇ ಎಲ್ಲ ಪ್ಲೇಯರ್ಸ್ ಅರುಣ್ ಜೇಟ್ಲಿ ಮೈದಾನದಲ್ಲಿ ಅಭ್ಯಾಸ ಆರಂಭಿಸಿದ್ದಾರೆ.
ಇದನ್ನೂ ಓದಿ: ಹರಿಣಗಳ ವಿರುದ್ಧ ಟಿ-20 ಫೈಟ್.. ಕೋಚ್ ದ್ರಾವಿಡ್ ನೇತೃತ್ವದಲ್ಲಿ ಟೀಂ ಇಂಡಿಯಾ ಅಭ್ಯಾಸ
ಜೂನ್ 9ರಂದು ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ಮೊದಲ ಪಂದ್ಯ ನಡೆಯಲಿದ್ದು, ಇದಾದ ಬಳಿಕ ಜೂನ್ 12ರಂದು ಕಟಕ್, ಜೂನ್ 14 ವಿಶಾಖಪಟ್ಟಣಂ, ಜೂನ್ 17 ರಾಜ್ಕೋಟ್ ಹಾಗೂ ಜೂನ್ 19ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೊನೆಯ ಪಂದ್ಯ ನಡೆಯಲಿದೆ. ಎರಡು ತಿಂಗಳ ಕಾಲ ಸುದೀರ್ಘ ಐಪಿಎಲ್ನಲ್ಲಿ ಭಾಗಿಯಾಗಿರುವ ಕಾರಣ ಟೀಂ ಇಂಡಿಯಾ ಖಾಯಂ ಕ್ಯಾಪ್ಟನ್ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ ಸೇರಿದಂತೆ ಅನೇಕ ಹಿರಿಯರು ವಿಶ್ರಾಂತಿ ಪಡೆದುಕೊಂಡಿದ್ದಾರೆ. ಹೀಗಾಗಿ, ತಂಡವನ್ನ ಕೆಎಲ್ ರಾಹುಲ್ ಮುನ್ನಡೆಸಲಿದ್ದಾರೆ.