ಜೈಪುರ (ರಾಜಸ್ಥಾನ): ಭಾನುವಾರದಿಂದ ಆರಂಭವಾಗಲಿರುವ ಭಾರತದ ವಿರುದ್ಧದ ಟಿ20 ಸರಣಿಯಿಂದ ನ್ಯೂಜಿಲ್ಯಾಂಡ್ ತಂಡದ ವೇಗಿ ಕೈಲ್ ಜೇಮಿಸನ್ ಹೊರಬಂದಿದ್ದಾರೆ. ಅವರು ಟೆಸ್ಟ್ ತಂಡಕ್ಕೆ ಸಿದ್ಧತೆ ಮಾಡಿಕೊಳ್ಳುವ ದೃಷ್ಟಿಯಿಂದ 3 ಪಂದ್ಯಗಳ ಚುಟುಕು ಸರಣಿಯಿಂದ ಹಿಂದೆ ಸರಿದಿದ್ದಾರೆ.
ಟಿ20 ವಿಶ್ವಕಪ್ನಲ್ಲಿ ರನ್ನರ್ ಅಪ್ ಆಗಿರುವ ನ್ಯೂಜಿಲ್ಯಾಂಡ್ ಆಟಗಾರರು ವಿಶ್ವಕಪ್ನಲ್ಲಿ ಸತತ ಪಂದ್ಯಗಳನ್ನಾಡಿ ದಣಿದಿದ್ದರು. ಹೀಗಾಗಿ, ನಾಯಕ ಕೇನ್ ವಿಲಿಯಮ್ಸನ್ ಮೊದಲು ಟಿ20 ಸರಣಿಯಿಂದ ಹಿಂದೆ ಸರಿಯುವ ನಿರ್ಧಾರ ತೆಗೆದುಕೊಂಡಿದ್ದರು. ಇದೀಗ ವಿಶ್ವಕಪ್ನಲ್ಲಿ ಒಂದೂ ಪಂದ್ಯವನ್ನಾಡದ ಕೈಲ್ ಜೇಮಿಸನ್ ಕೂಡ ಟೆಸ್ಟ್ ಸರಣಿಗೆ ಮಹತ್ವ ನೀಡಿದ್ದಾರೆ.
ಈ ಕುರಿತು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಕಿವೀಸ್ ಕೋಚ್ ಗ್ಯಾರಿ ಸ್ಟೀಡ್, "ಕೇನ್ (ವಿಲಿಯಮ್ಸನ್) ಹಾಗೂ ಕೈಲ್ (ಜೇಮಿಸನ್) ಅವರ ಬಳಿ ಈ ವಿಷಯದ ಬಗ್ಗೆ ಚರ್ಚೆ ನಡೆಸಿದ್ದೇವೆ. ಅವರಿಬ್ಬರೂ ಟಿ20 ಸರಣಿಯಲ್ಲಿ ಆಡುವುದಿಲ್ಲ. ಅವರಿಬ್ಬರೂ ಭಾರತ ವಿರುದ್ಧದ ಟೆಸ್ಟ್ ಪಂದ್ಯಗಳಿಗೆ ಸಜ್ಜಾಗಲಿದ್ದಾರೆ. ನಾವೆಲ್ಲರೂ ಅವರನ್ನು ಸಂಪೂರ್ಣ ಟೆಸ್ಟ್ ಸರಣಿಯಲ್ಲಿ ನೋಡಬಹುದು ಎಂದು ಭಾವಿಸುತ್ತೇನೆ " ಎಂದು ತಿಳಿಸಿದರು.
"5 ದಿನಗಳಲ್ಲಿ ಮೂರು ಪಂದ್ಯಗಳು ನಡೆಯಲಿದೆ. ಜೊತೆಗೆ, ಮೂರು ವಿಭಿನ್ನ ನಗರಗಳಲ್ಲಿ ಪ್ರಯಾಣ ಬೆಳೆಸುವುದು ತುಂಬಾ ಸಮಯದ ಅಭಾವವಾಗಲಿದೆ. ಹಾಗಾಗಿ, ಈ ಸನ್ನಿವೇಶದಲ್ಲಿ ತಂಡದಲ್ಲಿ ಸಂಯೋಜನೆ ಕಾಯ್ದುಕೊಳ್ಳಬೇಕಾಗುತ್ತದೆ" ಎಂದು ಸ್ಟೀಡ್ ಹೇಳಿದ್ದಾರೆ.
ಕಿವೀಸ್ ಆಟಗಾರರಲ್ಲದೆ, ಭಾರತದ ಜಸ್ಪ್ರೀತ್ ಬುಮ್ರಾ, ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ, ಮೊಹಮ್ಮದ್ ಶಮಿ ಸೇರಿದಂತೆ ಹಲವು ಕ್ರಿಕೆಟಿಗರಿಗೆ ವಿಶ್ರಾಂತಿ ನೀಡಲಾಗಿದೆ. ಇವರ ಬದಲಾಗಿ ಕೆಲವು ಐಪಿಎಲ್ ಸ್ಟಾರ್ಗಳು ಕಣಕ್ಕಿಳಿದಿದ್ದಾರೆ.
ಎರಡು ತಂಡಗಳ ನಡುವೆ ನವೆಂಬರ್ 17,19 ಮತ್ತು 21 ರಂದು ಟಿ20 ಮತ್ತು ನವೆಂಬರ್ 25 ರಿಂದ 29 ಹಾಗೂ ಡಿಸೆಂಬರ್ 3ರಿಂದ 07 ರವರೆಗೆ ಕಾನ್ಪುರ ಮತ್ತು ಮುಂಬೈನಲ್ಲಿ ಎರಡು ಟೆಸ್ಟ್ ಪಂದ್ಯಗಳು ನಡೆಯಲಿವೆ.
ಇದನ್ನೂ ಓದಿ: ind vs nz: ಜೈಪುರದಲ್ಲಿಂದು ಮೊದಲ ಟಿ-20 ಫೈಟ್