ರಾಂಚಿ(ಜಾರ್ಖಂಡ್): ಜೈಪುರದಲ್ಲಿ ನಡೆದ ಪಂದ್ಯದಲ್ಲಿ ಗೆಲುವಿನ ಶುಭಾರಂಭ ಮಾಡಿದ್ದ ಟೀಂ ಇಂಡಿಯಾ ರಾಂಚಿಯಲ್ಲಿಂದು 2ನೇ ಟಿ-20 ಪಂದ್ಯದಲ್ಲಿ ನ್ಯೂಜಿಲೆಂಡ್(IND vs NZ) ತಂಡವನ್ನು ಎದುರಿಸಲಿದೆ.
ಇಂದಿನ ಪಂದ್ಯವನ್ನು ಗೆದ್ದು ಸರಣಿ ಕೈವಶ ಮಾಡಿಕೊಳ್ಳಲು ನಾಯಕ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ರಣ ತಂತ್ರಗಳನ್ನು ರೂಪಿಸುತ್ತಿದೆ. ಈ ಸರಣಿ ಗೆದ್ದರಿಗೆ ಭಾರತ ತವರಿನಲ್ಲಿ ಸತತ 5 ಟಿ-20 ಸರಣಿಗಳನ್ನು ಗೆದ್ದಂತಾಗುತ್ತದೆ. ಜೊತೆಗೆ ನಾಯಕ ರೋಹಿತ್ ಹಾಗೂ ಕೋಚ್ ರಾಹುಲ್ ದ್ರಾವಿಡ್‌ಗೆ ಇದು ಮೊದಲ ಸರಣಿ ಗೆಲುವಾಗಲಿದೆ.
ಆರಂಭಿಕರಾದ ಕೆ.ಎಲ್.ರಾಹುಲ್ ಹಾಗೂ ರೋಹಿತ್ ಶರ್ಮಾ ತಂಡವನ್ನು ಉತ್ತಮವಾದ ಆರಂಭ ಒದಗಿಸುತ್ತಿದ್ದಾರೆ. ಆದರೆ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟರ್‌ಗಳು ಮಿಂಚಬೇಕಿದೆ. ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಕಳೆದ ಪಂದ್ಯದಲ್ಲಿ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ್ದ ಸೂರ್ಯಕುಮಾರ್ ಸ್ಫೋಟಕ ಬ್ಯಾಟಿಂಗ್ ಮೂಲಕ ತಂಡದ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದ್ದರು. ಆದರೆ ಬಹುದಿನಗಳ ನಂತರ ತಂಡದಲ್ಲಿ ಸ್ಥಾನ ಪಡೆದಿರುವ ಶ್ರೇಯಸ್ ಅಯ್ಯರ್ ರನ್ ಗಳಿಸಲು ತಿಣುಕಾಡಿದ್ದು, ಇಂದಿನ ಪಂದ್ಯದಲ್ಲಿ ತಮ್ಮ ಬ್ಯಾಟ್‌ನಿಂದ ಉತ್ತಮ ರನ್ ಸಿಡಿಸಬೇಕಿದೆ.
ಇನ್ನು, ಐಪಿಎಲ್‌ನಲ್ಲಿ ಮಿಂಚುವ ಮೂಲಕ ಭಾರತ ತಂಡದಲ್ಲಿ ಸ್ಥಾನ ಪಡೆದಿರುವ ವೆಂಕಟೇಶ್ ಅಯ್ಯರ್ ಮೊದಲ ಪಂದ್ಯದಲ್ಲಿ ಮೊದಲ ಎಸೆತವನ್ನು ಬೌಂಡರಿ ಗೆರೆ ದಾಟಿಸುವ ಮೂಲಕ ಭರವಸೆ ಮೂಡಿಸಿದ್ದರು. ಆದರೆ ಅದೇ ಓವರ್‌ನಲ್ಲಿ ಪ್ರಯೋಗ ಮಾಡಲು ಹೋಗಿ ಬಂದಷ್ಟೇ ವೇಗವಾಗಿ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿಕೊಂಡಿದ್ದರು.
ಹೀಗಾಗಿ ಇಂದಿನ ಪಂದ್ಯದಲ್ಲಿ ಕಿವೀಸ್ ತಂಡವನ್ನು ಸರಿಯಾಗಿ ದಂಡಿಸುವ ಮೂಲಕ ಮುಂದಿನ ಸರಣಿಗಳಿಗೂ ಆಯ್ಕೆ ಸಮಿತಿ ತಮ್ಮನ್ನು ಪರಿಗಣಿಸುವಂತೆ ವೆಂಕಟೇಶ್ ಮಾಡಬೇಕಿದೆ. ಇತ್ತ ನ್ಯೂಜಿಲೆಂಡ್ ಕೂಡ ಬಲಿಷ್ಠ ಬ್ಯಾಟಿಂಗ್ ಪಡೆಯನ್ನೇ ಹೊಂದಿದ್ದು, ಟೀಂ ಇಂಡಿಯಾಗೆ ತಿರುಗೇಟು ನೀಡಲು ಕಾಯುತ್ತಿದೆ. ಪಂದ್ಯ ಸಂಜೆ 7.30ಕ್ಕೆ ಆರಂಭವಾಗಲಿದೆ.