ಹೈದರಾಬಾದ್: ಸೀಮಿತ ಓವರ್ಗಳ ಕ್ರಿಕೆಟ್ ತಂಡದ ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ಮಾಧ್ಯಮಗೋಷ್ಟಿಯಲ್ಲಿ ಭಾಗಿಯಾಗಿ ಭಾರತ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅನೇಕ ವಿಚಾರಗಳನ್ನು ಹೊರಹಾಕಿದ್ದಾರೆ. ಪ್ರಮುಖವಾಗಿ ಏಕದಿನ ತಂಡದ ನಾಯಕತ್ವದಿಂದ ವಜಾಗೊಳಿಸುವ ಬಗ್ಗೆ ತಮಗೆ ಮೊದಲೇ ಮಾಹಿತಿ ನೀಡಿರಲಿಲ್ಲ ಎಂಬ ಅಂಶವನ್ನ ಬಿಚ್ಚಿಟ್ಟಿದ್ದಾರೆ.
ಇದೇ ವೇಳೆ ದಕ್ಷಿಣ ಆಫ್ರಿಕಾ ಸರಣಿಗೆ ತಾವು ಸಿದ್ಧಗೊಂಡಿರುವುದಾಗಿ ತಿಳಿಸಿರುವ ವಿರಾಟ್, ಹರಿಣಗಳ ನಾಡಲ್ಲಿ ಟೆಸ್ಟ್ ಸರಣಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಆಸ್ಟ್ರೇಲಿಯಾ, ಇಂಗ್ಲೆಂಡ್, ವೆಸ್ಟ್ ಇಂಡೀಸ್, ಶ್ರೀಲಂಕಾ ಸೇರಿದಂತೆ ಬಹುತೇಕ ಎಲ್ಲ ದೇಶಗಳಲ್ಲಿ ಟೆಸ್ಟ್ ಸರಣಿ ಗೆದ್ದಿರುವ ಟೀಂ ಇಂಡಿಯಾ ಹರಿಣಿಗಳ ನಾಡಲ್ಲಿ ಮಾತ್ರ ಈ ಸಾಧನೆ ಮಾಡಿಲ್ಲ. ಈ ವಿಚಾರವಾಗಿ ಮಾತನಾಡಿದ ಕೊಹ್ಲಿ, ನಾವು ಟೆಸ್ಟ್ ಆಡಿರುವ ಎಲ್ಲ ದೇಶಗಳಲ್ಲಿ ಸರಣಿ ಗೆದ್ದಿದ್ದೇವೆ. ಆದರೆ ಈ ಸಲದ ದಕ್ಷಿಣ ಆಫ್ರಿಕಾ ಸರಣಿಯಲ್ಲಿ ವಿಶೇಷ ಸಾಧನೆ ಮಾಡಲಿದ್ದೇವೆ ಎಂದು ಭರವಸೆಯ ಮಾತುಗಳನ್ನಾಡಿದ್ದಾರೆ.
ಹರಿಣಗಳ ನಾಡಲ್ಲಿ ಚೊಚ್ಚಲ ಟೆಸ್ಟ್ ಸರಣಿ ಜಯಿಸುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿರುವ ವಿರಾಟ್ ನೇತೃತ್ವದ ಟೀಂ ಇಂಡಿಯಾ, ಇಂದು ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದೆ. ಡಿಸೆಂಬರ್ 26ರಿಂದ ಟೆಸ್ಟ್ ಸರಣಿ ಆರಂಭಗೊಳ್ಳಲಿದ್ದು, ಮೂರು ಪಂದ್ಯಗಳ ಸರಣಿ ನಡೆಯಲಿದೆ. ದಕ್ಷಿಣ ಆಫ್ರಿಕಾದಲ್ಲಿ ಟೀಂ ಇಂಡಿಯಾ ಇಲ್ಲಿಯವರೆಗೆ 20 ಟೆಸ್ಟ್ ಪಂದ್ಯಗಳನ್ನಾಡಿದ್ದು, 7 ಡ್ರಾ ಆಗಿದ್ದು, ಕೇವಲ 3ರಲ್ಲಿ ಭಾರತ ಗೆಲುವು ಸಾಧಿಸಿದೆ. 10 ಪಂದ್ಯಗಳಲ್ಲಿ ಸೋಲು ಕಂಡಿದೆ.
ಗಂಗೂಲಿ ವಿರುದ್ಧ ಆರೋಪ
ನಾನು ಟಿ20 ನಾಯಕತ್ವ ತ್ಯಜಿಸಲು ನಿರ್ಧರಿಸಿದಾಗ ಮತ್ತು ಬಿಸಿಸಿಐ ಸಂಪರ್ಕಿಸಿ ನನ್ನ ನಿರ್ಧಾರವನ್ನು ತಿಳಿಸಿದ್ದೆ. ಅಂದು ಮಂಡಳಿ ಅದನ್ನು ಚೆನ್ನಾಗಿಯೇ ಸ್ವೀಕರಿಸಿತ್ತು. ಆ ಸಂದರ್ಭದಲ್ಲಿ ನನ್ನ ನಿರ್ಧಾರವನ್ನು ಯಾರೊಬ್ಬರು ಪರಿಶೀಲಿಸಿ ಎಂದು ಹೇಳಲಿಲ್ಲ. ಅದನ್ನು ಸ್ವೀಕರಿಸಿದ ನಂತರ, ನನ್ನ ನಿರ್ಧಾರ ಸರಿಯಾದ ದಿಕ್ಕಿನಲ್ಲಿದೆ ಎಂದಿದ್ದರು.
ಈ ಸಂದರ್ಭದಲ್ಲಿ ನಾನು ಏಕದಿನ ಮತ್ತು ಟೆಸ್ಟ್ ತಂಡದಲ್ಲಿ ನಾಯಕನಾಗಿ ಮುಂದುವರಿಯುವುದಾಗಿ ಹೇಳಿದ್ದೆ. ಇದರಲ್ಲಿ ನನ್ನ ಮಾತು ಸ್ಪಷ್ಟವಾಗಿತ್ತು. ಅದರ ಆಯ್ಕೆಯನ್ನು ಅವರಿಗೆ(ಬಿಸಿಸಿಐ ಅಧ್ಯಕ್ಷ ಗಂಗೂಲಿ) ಬಿಟ್ಟಿದ್ದೆ. ನಾನು ಏಕದಿನ ಮತ್ತು ಟೆಸ್ಟ್ನಲ್ಲಿ ನಾಯಕನಾಗಿ ಮುಂದುವರಿಯುವ ನಿರ್ಧಾರ ಅವರ ಕೈಯಲ್ಲಿತ್ತು ಎಂದು ಕೊಹ್ಲಿ ಬುಧವಾರ ನಡೆದ ಮಾಧ್ಯಮಗೋಷ್ಟಿಯಲ್ಲಿ ಹೇಳಿದ್ದರು.