ಕೆನ್ಬೆರಾ: ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಭಾರತ ತಂಡ ಉತ್ತಮ ಮೊತ್ತ ಕಲೆ ಹಾಕಿದೆ. ನಾಯಕ ವಿರಾಟ್ ಕೊಹ್ಲಿ ಅರ್ಧಶತಕದ ಸಿಡಿಸಿದರೆ, ಅಂತಿಮ ಹಂತದಲ್ಲಿ ಹಾರ್ದಿಕ್ ಪಾಂಡ್ಯ - ರವೀಂದ್ರ ಜಡೇಜಾ ಸ್ಫೋಟಕ ಜತೆಯಾಟದ ನೆರವಿನಿಂದ 50 ಓವರ್ಗಳಲ್ಲಿ 302 ರನ್ಗಳ ಟಾರ್ಗೆಟ್ ನೀಡಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ ಉತ್ತಮ ಆರಂಭ ಪಡೆದುಕೊಳ್ಳಲಿಲ್ಲ. ಓಪನರ್ಗಳಾಗಿ ಇನ್ನಿಂಗ್ಸ್ ಆರಂಭಿಸಿದ ಶುಭ್ಮನ್ ಗಿಲ್ ಹಾಗೂ ಶಿಖರ್ ಧವನ್ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. ಧವನ್ 16 ರನ್ ಗಳಿಸಿ ಔಟಾದರು.
2ನೇ ವಿಕೆಟ್ಗೆ ಗಿಲ್ ಜೊತೆಯಾದ ನಾಯಕ ವಿರಾಟ್ ಕೊಹ್ಲಿ ಉತ್ತಮ ಜೊತೆಯಾಟ ಆಡಿದರು. ಈ ಜೋಡಿ 56 ರನ್ಗಳ ಕಾಣಿಕೆ ನೀಡಿತು. ಶುಭ್ಮನ್ ಗಿಲ್ 33 ರನ್ ಗಳಿಸಿದ್ದಾಗ ಎಲ್ಬಿ ಬಲೆಗೆ ಸಿಲುಕಿದರು. ಶ್ರೇಯಸ್ ಅಯ್ಯರ್ 19 ರನ್ಗಳಿಸಿ ಔಟಾದರು.
ಓದಿ: ಸಚಿನ್ ದಾಖಲೆ ಮುರಿದ ವಿರಾಟ್: ವೇಗದ ರನ್ ಸರದಾರನಾದ ಕಿಂಗ್ ಕೊಹ್ಲಿ
ಇತ್ತ ಕೆ.ಎಲ್.ರಾಹುಲ್(5) ಬಂದ ಹಾಗೆಯೇ ಮರಳಿ ಪೆವಿಲಿಯನ್ ಸೇರಿದರು. 78 ಎಸೆತಗಳಲ್ಲಿ 63 ರನ್ ಗಳಿಸಿ ಕೊಹ್ಲಿ ಔಟ್ ಆಗಿದ್ದು ತಂಡಕ್ಕೆ ಹಿನ್ನಡೆಯಾಯಿತು. ಈ ಸಂದರ್ಭ ಕ್ರಿಸಿಗೆ ಬಂದ ರವೀಂದ್ರ ಜಡೇಜಾ ಹಾಗೂ ಹಾರ್ದಿಕ್ ಪಾಂಡ್ಯ ತಂಡಕ್ಕೆ ಆಸರೆಯಾದರು. ಈ ಜೋಡಿ ಅತ್ಯುತ್ತಮ ಶತಕದ ಜೊತೆಯಾಟ (150 ರನ್) ಆಡಿ ತಂಡದ ಮೊತ್ತವನ್ನು ಏರಿಸಿತು.
ಹಾರ್ದಿಕ್ 76 ಎಸೆತಗಳಲ್ಲಿ 7 ಬೌಂಡರಿ, 1 ಸಿಕ್ಸರ್ ಬಾರಿಸಿ ಅಜೇಯ 92 ರನ್ ಗಳಿಸಿದರೆ, ಜಡೇಜಾ ಕೇವಲ 50 ಎಸೆತಗಳಲ್ಲಿ 5 ಬೌಂಡರಿ, 3 ಸಿಕ್ಸರ್ ಚಚ್ಚಿ ಅಜೇಯ 66 ರನ್ ಬಾರಿಸಿದರು.
ಅಂತಿಮವಾಗಿ ಭಾರತ 50 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 302 ರನ್ ಗಳಿಸಿತು. ಆಸ್ಟ್ರೇಲಿಯಾ ಪರ ಅಸ್ಟರ್ ಅಗರ್ 2 ವಿಕೆಟ್, ಜೋಶ್ ಹೇಜಲ್ವುಡ್, ಸೀನ್ ಅಬ್ಬಟ್ ಹಾಗೂ ಆ್ಯಡಂ ಜಂಪಾ ತಲಾ 1 ವಿಕೆಟ್ ಪಡೆದರು.