ಸಿಡ್ನಿ : ನೂತನ ವರ್ಷದ ದಿನದಂದು ಮೆಲ್ಬೋರ್ನ್‌ನ ರೆಸ್ಟೋರೆಂಟ್ಗೆ ತೆರಳಿ ಊಟ ಮಾಡಿದ್ದ ಭಾರತದ ತಂಡದ ಉಪನಾಯಕ ರೋಹಿತ್ ಶರ್ಮಾ, ರಿಷಭ್ ಪಂತ್, ಶುಭ್‌ಮನ್ ಗಿಲ್, ಪೃಥ್ವಿ ಶಾ ಮತ್ತು ನವದೀಪ್ ಸೈನಿ ಅವರನ್ನು ಮುನ್ನೆಚ್ಚರಿಕೆ ಕ್ರಮವಾಗಿ ಐಸೋಲೇಟ್ಗೆ (ಪ್ರತ್ಯೇಕವಾಗಿ) ಒಳಪಡಿಸಲಾಗಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಖಚಿತಪಡಿಸಿದೆ.
ರೆಸ್ಟೋರೆಂಟ್ನಲ್ಲಿ ಊಟ ಸೇವಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆಟಗಾರರು ಜೈವಿಕ ಸುರಕ್ಷಿತ ಬಯೋಬಬಲ್ ಪ್ರೋಟೋಕಾಲ್ ಉಲ್ಲಂಘನೆ ಮಾಡಿದ್ದು, ನೆಟ್ಟಿಗರು ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಹೀಗಾಗಿ, ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮತ್ತು ಕ್ರಿಕೆಟ್ ಆಸ್ಟ್ರೇಲಿಯಾವು (ಸಿಎ) ಆಟಗಾರರಿಂದ ಪ್ರೋಟೋಕಾಲ್ ಉಲ್ಲಂಘನೆಯಾಗಿದೆಯೇ, ಇಲ್ಲವೇ ಎಂಬುದನ್ನು ತನಿಖೆ ಕೈಗೊಂಡಿದೆ. ಅಲ್ಲದೆ, ಈಗಾಗಲೇ ಆಟಗಾರರಿಗೆ ಬಿಸಿಸಿಐ ಎಚ್ಚರಿಕೆ ನೀಡಿದೆ.
ಆಸ್ಟ್ರೇಲಿಯಾ ಮತ್ತು ಭಾರತದ ವೈದ್ಯಕೀಯ ತಂಡಗಳ ಸಲಹೆ ಮೇರೆಗೆ ಈ ಐವರು ಆಟಗಾರರನ್ನು ಪ್ರತ್ಯೇಕ ಇರಿಸಲಾಗಿದೆ. ಅಭ್ಯಾಸದಲ್ಲಿ ತೊಡಗಿರುವ ಉಳಿದ ಆಟಗಾರರಿಗೆ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ಪ್ರಯಾಣ ಮತ್ತು ತರಬೇತಿ ಸಂದರ್ಭದಲ್ಲಿ ಆಟಗಾರರ ಗುಂಪನ್ನು ವಿಂಗಡಿಸಲಾಗಿದೆ ಎಂದು ಹೇಳಿದೆ.
ಸುರಕ್ಷತೆಗೆ ಜಾರಿಗೆ ತರಲಾದ ಕಟ್ಟುನಿಟ್ಟಾದ ನಿಯಮಗಳ ಕುರಿತು ಎರಡೂ ತಂಡಗಳ ಆಟಗಾರರಿಗೆ ತರಬೇತಿ ನೀಡಲಾಗಿದೆ. ಬಿಬಿಎಲ್ನ (ಬಿಗ್ ಬ್ಯಾಷ್ ಲೀಗ್) ಬ್ರಿಸ್ಬೇನ್ ಹೀಟ್ ತಂಡದ ಇಬ್ಬರು ಆಟಗಾರರು ಬಯೋಬಬಲ್ ಸುರಕ್ಷತೆ ಉಲ್ಲಂಘಿಸಿದ ಕಾರಣ, ಟೂರ್ನ್ಮೆಂಟ್ನಿಂದ ಹೊರಗುಳಿದಿದ್ದಾರೆ ಎಂದು ಸಿಎ ಹೇಳಿದೆ.