ಬ್ರಿಸ್ಬೇನ್: ಬಾರ್ಡರ್ - ಗವಾಸ್ಕರ್ ಸರಣಿಯ ಅಂತಿಮ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿಯಾಗಿ ಜಯಗಳಿಸಿದೆ. 328 ರನ್ಗಳ ಟಾರ್ಗೆಟ್ ಬೆನ್ನತ್ತಿದ ಟೀಮ್ ಇಂಡಿಯಾ 7 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿದೆ.
4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ 2-1 ಅಂತರದಿಂದ ಭರ್ಜರಿ ಜಯ ಸಾಧಿಸಿದೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಹೀನಾಯವಾಗಿ ಸೋಲು ಕಂಡಿದ್ದ ಭಾರತ, ಎರಡನೇ ಟೆಸ್ಟ್ ಪಂದ್ಯದಲ್ಲಿ ಪುಟಿದೆದ್ದು ಪಂದ್ಯವನ್ನು ಗೆದ್ದುಕೊಂಡು ಸರಣಿ ಸಮಬಲ ಸಾಧಿಸಿತ್ತು. ಮೂರನೇ ಟೆಸ್ಟ್ನಲ್ಲಿ ಟೀಮ್ ಇಂಡಿಯಾ ಗಾಯದ ಸಮಸ್ಯೆಯಿಂದ ಬಳಲುತ್ತಿತ್ತು. ಪ್ರಮುಖ ಆಟಗಾರರೇ ತಂಡದಿಂದ ಹೊರಗುಳಿಯಬೇಕಾಯಿತು. ಆದರೂ ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಿದ ಯುವ ಪಡೆ ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು.
ತೀವ್ರ ಕುತೂಹಲ ಕೆರಳಿಸಿದ್ದ 4ನೇ ಮತ್ತು ಅಂತಿಮ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಕಾಂಗರೂ ಪಡೆ ಮುನ್ನಡೆ ಸಾಧಿಸಿತ್ತು. ಆದರೆ, ಎರಡನೇ ಇನ್ನಿಂಗ್ಸ್ನಲ್ಲಿ ಕಮ್ಬ್ಯಾಕ್ ಮಾಡಿದ ರಹಾನೆ ಪಡೆ ಪಂದ್ಯವನ್ನು ಗೆದ್ದು ಇತಿಹಾಸ ಸೃಷ್ಟಿಸಿತು.
ದ್ವಿತೀಯ ಇನ್ನಿಂಗ್ಸ್ನಲ್ಲಿ ಟೀಂ ಇಂಡಿಯಾ ಮೊದಲ ವಿರಾಮದ ವೇಳೆಗೆ ಸುಭದ್ರ ಸ್ಥಿತಿಯಲ್ಲಿತ್ತು. ಕೊನೆಯ ದಿನ ಇನ್ನಿಂಗ್ಸ್ ಆರಂಭಿಸಿದ ಹಿಟ್ ಮ್ಯಾನ್ ರೋಹಿತ್ ಶರ್ಮಾ ಮತ್ತು ಶುಬ್ಮನ್ ಗಿಲ್ ತಂಡಕ್ಕೆ ಭದ್ರ ಬುನಾದಿ ಹಾಕಿಕೊಡುವಲ್ಲಿ ಮತ್ತೆ ಎಡವಿದರು. ರೋಹಿತ್ ಶರ್ಮಾ ಕೇವಲ 7 ರನ್ಗಳಿಸಿ ಔಟಾಗಿ ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿದರು. ನಂತರ ಕ್ರೀಸ್ ಗಿಳಿದ ಅನುಭವಿ ಬ್ಯಾಟ್ಸ್ಮನ್ ಚೇತೇಶ್ವರ ಪೂಜಾರ, ಯಂಗ್ ಬಾಯ್ ಗಿಲ್ ಜೊತೆ ಅದ್ಭುತ ಇನ್ನಿಂಗ್ಸ್ ಕಟ್ಟಿದರು. ಈ ಜೋಡಿ ಎರಡನೇ ವಿಕೆಟ್ಗೆ ಶತಕದ ಜೊತೆಯಾಟವಾಡಿತು.
ಹೊಡಿ ಬಡಿ ಆಟಕ್ಕೆ ಮುಂದಾಗಿದ್ದ ಗಿಲ್ ಪಂದ್ಯವನ್ನು ಗೆಲ್ಲಿಸಲೇಬೇಕು ಎನ್ನುವ ಹಠದಲ್ಲಿ ಬ್ಯಾಟ್ ಬೀಸಿದರು. ಅದ್ಭುತ ಫಾರ್ಮ್ನಲ್ಲಿದ್ದ ಗಿಲ್ ಕಾಂಗರೂ ಬೌಲರ್ಗಳನ್ನು ಕಾಡಿದರು. ಈ ವೇಳೆ ದಾಳಿಗಿಳಿದ ನಾಥನ್ ಲಿಯಾನ್, ಶುಬ್ಮನ್ ಗಿಲ್ ವಿಕೆಟ್ ಪಡೆಯುವ ಮೂಲಕ ಆಸೀಸ್ ಪಡೆಗೆ ಬ್ರೇಕ್ ತಂದು ಕೊಟ್ಟರು. ಈ ಇನ್ನಿಂಗ್ಸ್ನಲ್ಲಿ ಗಿಲ್ 146 ಎಸೆತ ಎದುರಿಸಿ, 8 ಬೌಂಡರಿ ಹಾಗೂ 2 ಸಿಕ್ಸರ್ ಸಹಾಯದಿಂದ 91 ರನ್ ಗಳಿಸಿ ಔಟಾಗುವ ಮೂಲಕ, ಚೊಚ್ಚಲ ಶತಕವನ್ನು ಕೂದಲೆಳೆ ಅಂತರದಿಂದ ತಪ್ಪಿಸಿಕೊಂಡು ನಿರಾಸೆ ಅನುಭವಿಸಿದರು.
ಗಿಲ್ ವಿಕೆಟ್ ನಂತರ ಕ್ರಿಸ್ಗಿಳಿದ ನಾಯಕ ರಹಾನೆ ಆಟ ಕೇವಲ 24 ರನ್ಗಳಿಗೆ ಅಂತ್ಯವಾಯಿತು. ನಂತರ ಪೂಜಾರ ಜೊತೆ ಸೇರಿದ ರಿಷಭ್ ಪಂತ್ ತಾಳ್ಮೆಯ ಆಟಕ್ಕೆ ಮುಂದಾದರು. ಮೊದಲ ಇನ್ನಿಂಗ್ಸ್ನಲ್ಲಿ ಅಬ್ಬರಿಸಿದ್ದ ಪಂತ್ ಎರಡನೇ ಇನ್ನಿಂಗ್ಸ್ನಲ್ಲಿ ತಾಳ್ಮೆಯ ಆಟವಾಡಿದರು. ಆಮೆಗತಿ ಬ್ಯಾಟಿಂಗ್ ನಡೆಸಿದ ಅನುಭವಿ ಬ್ಯಾಟ್ಸ್ಮನ್ ಬರೋಬ್ಬರಿ 211 ಬಾಲ್ ಎದುರಿಸಿ 7 ಬೌಂಡರಿ ಸಹಿತ 56 ರನ್ಗಳಿಸಿ ಕಮಿನ್ಸ್ ಬೌಲಿಂಗ್ನಲ್ಲಿ ಔಟಾದರು.
ನಂತರ ಕ್ರೀಸ್ಗಿಳಿದ ಮಯಾಂಕ್ ಅಗರವಾಲ್ ಆರಂಭದಿಂದಲೇ ಅಬ್ಬರದ ಬ್ಯಾಟಿಂಗ್ ಮಾಡಲು ಯತ್ನಿಸಿದರು. ಆದರೆ, ಕಮಿನ್ಸ್ ಬೌಲಿಂಗ್ನಲ್ಲಿ ವೇಡ್ಗೆ ಕ್ಯಾಚ್ ನೀಡಿ ಕೇವಲ 9 ರನ್ ಗಳಿಸಿ ಪೆವಿಲಿಯನ್ ಸೇರಿದರು. ಇವರ ನಂತರ ಬಂದ ಮೊದಲ ಇನ್ನಿಂಗ್ಸ್ ಹೀರೋ ವಾಷಿಂಗ್ಟನ್ ಸುಂದರ್ ಮತ್ತೆ ದೊಡ್ಡ ಇನ್ನಿಂಗ್ಸ್ ಕಟ್ಟುವ ಮುನ್ಸೂಚನೆ ನೀಡಿದರು. ಆದರೆ 29 ಎಸೆತಗಳಲ್ಲಿ 2 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 22 ರನ್ಗಳಿಸಿ ಲಿಯಾನ್ಗೆ ವಿಕೆಟ್ ಒಪ್ಪಿಸಿ ನಿರ್ಗಮಿಸಿದರು. ನಂತರ ಮೈದಾನಕ್ಕಿಳಿದ ಶಾರ್ದೂಲ್ ಠಾಕೂರ್ 2 ರನ್ಗಳಿಸಿ ಹೆಜಲ್ವುಡ್ ಎಸೆತದಲ್ಲಿ ಔಟಾದರು. ಅದ್ಭುತ ಆಟವಾಡಿದ ರಿಷಭ್ ಪಂತ್ 89 ರನ್ಗಳಿಸಿ ಮಿಂಚಿದರು.
ಸ್ಕೋರ್ ವಿವರ:
ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್: 115.2 ಓವರ್ ಗಳಲ್ಲಿ 369, ಮಾರ್ಕಸ್ ಲಾಬುಶೇನ್ 108, ಟಿ ಪೇಯ್ನ್ 50, ಮ್ಯಾಥ್ಯೂ ವೇಡ್ 45
ಭಾರತದ ಬೌಲಿಂಗ್ : ಟಿ.ನಟರಾಜನ್ 78 /3, ಠಾಕೂರ್ 94/ 3, ವಾಷಿಂಗ್ಟನ್ ಸುಂದರ್ 89/3.
ಭಾರತ ಮೊದಲ ಇನ್ನಿಂಗ್ಸ್: 111.4 ಓವರ್ ಗಳಲ್ಲಿ 336 ರನ್, ಶಾರ್ದೂಲ್ ಠಾಕೂರ್ 67, ವಾಷಿಂಗ್ಟನ್ ಸುಂದರ್ 62, ರೋಹಿತ್ ಶರ್ಮಾ 44 ರನ್
ಆಸ್ಟ್ರೇಲಿಯಾ ಬೌಲಿಂಗ್: ಜೆ ಹೆಜಲ್ವುಡ್ 57 /5, ಮಿಚೆಲ್ ಸ್ಟಾರ್ಕ್ 88/ 2 ವಿಕೆಟ್.
ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್: 75.5 ಓವರ್ಗಳಲ್ಲಿ 294 , ಸ್ಮಿತ್ 55, ವಾರ್ನರ್ 48
ಭಾರತದ ಬೌಲಿಂಗ್ : ಸಿರಾಜ್ 73/5, ಶಾರ್ದೂಲ್ ಠಾಕೂರ್ 61/4
ಭಾರತ 2ನೇ ಇನ್ನಿಂಗ್ಸ್: 97 ಓವರ್ಗಳಲ್ಲಿ 329 ಶುಬ್ಮನ್ ಗಿಲ್ 91, ಪೂಜಾರ 56, ಪಂತ್
ಆಸ್ಟ್ರೇಲಿಯಾ ಬೌಲಿಂಗ್: ಕಮಿನ್ಸ್ 4, ನಾಥನ್ ಲಿಯಾನ್ 2