ಸಿಡ್ನಿ: ಭಾರತ ವಿರುದ್ಧ ನಡೆಯುತ್ತಿರುವ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯು ಬಹಳ ಪೈಪೋಟಿಯಿಂದ ಕೂಡಿದ್ದು, ಉಳಿದ ಎರಡು ಪಂದ್ಯಗಳ ಮೇಲೆ ಹೆಚ್ಚಿನ ನಿರೀಕ್ಷೆ ಇದೆ ಎಂದು ಆಸ್ಟ್ರೇಲಿಯಾ ಕೋಚ್ ಜಸ್ಟಿನ್ ಲ್ಯಾಂಗರ್ ಹೇಳಿದ್ದಾರೆ.
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕು ಪಂದ್ಯಗಳ ಸರಣಿ ಪ್ರಸ್ತುತ 1-1ರಲ್ಲಿ ಸಮವಾಗಿದ್ದು, ಮೂರನೇ ಟೆಸ್ಟ್ ಪಂದ್ಯ ಜ.7ರಿಂದ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ.
"2005ರ ಆಶಸ್ ಸರಣಿ ಉತ್ತಮ ಕ್ರಿಕೆಟ್ ಸರಣಿಯಾಗಿತ್ತು. ಈಗ ನಡೆಯುತ್ತಿರುವ ಸರಣಿ ಕೂಡ ಪ್ರಬಲ ಪೈಪೋಟಿಯಿಂದ ಕೂಡಿದೆ. ಸರಣಿಯು 1-1 ರಿಂದ ಸಮಬಲ ಕಂಡಿದ್ದು, ಮುಂದಿನ ಪಂದ್ಯಗಳೂ ರೋಚಕತೆಯಿಂದ ಕೂಡಿರಲಿವೆ ಎಂದಿದ್ದಾರೆ.
ನಾವು ಎರಡನೇ ಪಂದ್ಯ ಸೋತಿರಬಹುದು. ಆದರೆ, ಇದರಿಂದ ನಾವು ಕುಂದಿಲ್ಲ. ಮುಂದಿನ ಪಂದ್ಯಗಳನ್ನು ಗೆಲ್ಲುವ ವಿಶ್ವಾಸವಿದೆ. ನಮ್ಮ ತಂಡದ ಆಟಗಾರರು ಉತ್ತಮ ಫಾರ್ಮ್ನಲ್ಲಿದ್ದು, ಉತ್ತಮ ಆಟವಾಡುವ ವಿಶ್ವಾಸವಿದೆ. ನಮ್ಮಲ್ಲಿ ಸಾಕಷ್ಟು ಹೊಸ ಪ್ರತಿಭೆಗಳಿದ್ದು, ಅವರು ಮುಂದಿನ ಪಂದ್ಯಗಳಲ್ಲಿ ಮಿಂಚು ಹರಿಸಲಿದ್ದಾರೆ ಎಂದರು.
ಓದಿ : ಟೀಮ್ ಇಂಡಿಯಾಗೆ ಮತ್ತೊಂದು ಶಾಕ್: ಟೆಸ್ಟ್ ಸರಣಿಯಿಂದ ಕೆ.ಎಲ್.ರಾಹುಲ್ ಔಟ್
"ಅಶ್ವಿನ್ ಒಬ್ಬ ಉತ್ತಮ ಮತ್ತು ಕಠಿಣ ಬೌಲರ್. ಟೆಸ್ಟ್ ಕ್ರಿಕೆಟ್ನಲ್ಲಿ 380 ವಿಕೆಟ್ ಪಡೆದಿದ್ದಾರೆ. ಅವರನ್ನು ಎದುರಿಸುವುದು ಸುಲಭದ ಮಾತಲ್ಲ. ಶ್ರೇಷ್ಠ ಬೌಲರ್‌ಗಳ ವಿರುದ್ಧ ಸ್ಕೋರ್ ಮಾಡಲು ಕಷ್ಟಪಡಬೇಕಾಗುತ್ತದೆ. ಅಶ್ವಿನ್ಗೆ ಬೂಮ್ರಾ ಉತ್ತಮ ಸಾಥ್ ನೀಡುತ್ತಿದ್ದಾರೆ ಎಂದು ಹೇಳಿದರು.