ನವದೆಹಲಿ : ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾ ಸತತ ಎರಡು ಸೋಲು ಕಂಡಿದೆ. ಮೊದಲ ಪಂದ್ಯದಲ್ಲಿ 66 ರನ್ಗಳಿಂದ ಹೀನಾಯ ಸೋಲನುಭವಿಸಿದ್ರೆ, 2ನೇ ಪಂದ್ಯದಲ್ಲಿ 51 ರನ್ಗಳಿಂದ ಮುಗ್ಗರಿಸಿತು. ಇದರೊಂದಿಗೆ 3 ಪಂದ್ಯಗಳ ಸರಣಿಯನ್ನು ಈಗಾಗಲೇ ಆಸ್ಟ್ರೇಲಿಯಾ ತನ್ನದಾಗಿಸಿಕೊಂಡಿದೆ.
ಈ ಸೋಲಿನ ಹಿನ್ನೆಲೆ ವಿರಾಟ್ ಕೊಹ್ಲಿ ನಾಯಕತ್ವವನ್ನು ಭಾರತದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಟೀಕಿಸಿದ್ದಾರೆ. "ಪ್ರೀಮಿಯರ್ ಫಾಸ್ಟ್ ಬೌಲರ್" ಜಸ್ಪ್ರೀತ್ ಬುಮ್ರಾ ಅವರಿಗೆ ಪಂದ್ಯ ಆರಂಭದಲ್ಲಿ ಹೊಸ ಚಂಡಿನಲ್ಲಿ ಬೌಲಿಂಗ್ ಮಾಡಲು ಕೇವಲ ಎರಡು ಓವರ್ ನೀಡುವ ಕೊಹ್ಲಿ ನಿರ್ಧಾರವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಗಂಭೀರ್ ವ್ಯಂಗ್ಯವಾಡಿದ್ದಾರೆ.
"ನನಗೆ ವಿರಾಟ್ ನಾಯಕತ್ವವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ರೀತಿಯ ಬ್ಯಾಟಿಂಗ್ ತಂಡವನ್ನು ಕಟ್ಟಿ ಹಾಕಬೇಕಾದ್ರೆ ಪ್ರಧಾನ ಬೌಲರ್ಗೆ ಪಂದ್ಯದ ಆರಂಭದಲ್ಲಿ ಕೇವಲ ಎರಡು ಓವರ್ ನೀಡುತ್ತಿರುವುದು ಏಕೆ ಎಂದು ಅರ್ಥವಾಗುತ್ತಿಲ್ಲ. ಕನಿಷ್ಠ 4 ಓವರ್ ಬೌಲ್ ಮಾಡಲು ಅವಕಾಶ ನಿಡಬೇಕು ಎಂದು ಗಂಭೀರ್ ಹೇಳಿದ್ದಾರೆ.
ಓದಿ:ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಮತ್ತೊಂದು ದಾಖಲೆ ಬರೆದ ರನ್ ಮಷಿನ್ ವಿರಾಟ್ ಕೊಹ್ಲಿ
"ಪ್ರಧಾನ ಬೌಲರ್ಗೆ ಪಂದ್ಯದ ಆರಂಭದಲ್ಲಿ ಕೇವಲ ಎರಡು ಓವರ್ ನೀಡುತ್ತಿದ್ದಾರೆ, ಇದು ಟಿ20 ಕ್ರಿಕೆಟ್‌ನಲ್ಲೂ ಸಾಧ್ಯವಿಲ್ಲ. ನನಗೆ ನಿಜವಾಗಿಯೂ ವಿರಾಟ್ ನಾಯಕತ್ವವನ್ನು ಅರ್ಥಮಾಡಿಕೊಳ್ಳಲು ಆಗುತ್ತಿಲ್ಲ ಎಂದು ಗಂಭೀರ್ ಹೇಳಿದ್ದಾರೆ.
ಇಂಡಿಯಾಗೆ 6ನೇ ಬೌಲರ್ ಕೊರತೆ ಕಾಡುತ್ತಿದೆ. 2019ರ ವಿಶ್ವಕಪ್‌ನಿಂದ ಭಾರತಕ್ಕೆ ಈ ಸಮಸ್ಯೆ ಕಾಡುತ್ತಿದೆ. ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡದಿದ್ರೆ, ಆರನೇ ಬೌಲರ್ ಯಾರು? ಎಂಬ ಪ್ರಶ್ನೆಗೆ ಉತ್ತರವಿಲ್ಲ ಎಂದು ಗಂಭೀರ್ ತಿಳಿಸಿದರು.
ಟೀಮ್ ಇಂಡಿಯಾಗೆ ಆಲ್ರೌಂಡರ್ ಬೌಲರ್ಗಳ ಅವಶ್ಯಕತೆಯಿದೆ. ಆರನೇ ಬೌಲರ್ಗಳ ಕೊರತೆಯೇ ಟೀಮ್ ಇಂಡಿಯಾ ಸೋಲಿಗೆ ಕಾರಣವಾಗುತ್ತಿದೆ ಎಂದು ಗೌತಮ್ ಗಂಭೀರ್ ತಿಳಿಸಿದರು.