ನವದೆಹಲಿ: ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸೋಲಿನಿಂದ ಟೀಂ ಇಂಡಿಯಾ ಅಭಿಮಾನಿಗಳು ತೀವ್ರ ಬೇಸರಗೊಂಡಿದ್ದಾರೆ. ಐಸಿಸಿ ಟ್ರೋಫಿ ಗೆಲ್ಲದ 10 ವರ್ಷಗಳ ಬರ ಡಬ್ಲ್ಯುಟಿಸಿ ಫೈನಲ್‌ನಲ್ಲಿ ನೀಗಲಿದೆ ಎಂದು ಅಭಿಮಾನಿಗಳು ನಿರೀಕ್ಷೆಯಲ್ಲಿದ್ದರು. ಆದರೆ ನಿರಾಸೆಯಾಗಿದೆ. ಭಾರತದಲ್ಲಿ ಈ ವರ್ಷ ಏಕದಿನ ವಿಶ್ವಕಪ್ ನಡೆಯಲಿದೆ. ತಂಡಕ್ಕೆ ಇನ್ನೊಂದು ಅವಕಾಶ ಸಿಕ್ಕಿದೆ. ಟೆಸ್ಟ್ ಚಾಂಪಿಯನ್‌ಶಿಪ್ ನಂತರ ಭಾರತ ಆಡಲಿರುವ ಪಂದ್ಯಗಳ ವೇಳಾಪಟ್ಟಿ ಈ ಕೆಳಗಿನಂತಿದೆ.
- ಜುಲೈ- ಆಗಸ್ಟ್ 2023 (ವೆಸ್ಟ್ ಇಂಡೀಸ್ ಭಾರತ ಪ್ರವಾಸ): ಭಾರತ ತಂಡ ಜುಲೈನಲ್ಲಿ ವೆಸ್ಟ್ ಇಂಡೀಸ್ ಪ್ರವಾಸ ಮಾಡಲಿದೆ. ಜುಲೈ 12 ಮತ್ತು ಆಗಸ್ಟ್ 13 ರ ನಡುವೆ ಟೀಂ ಇಂಡಿಯಾ ಕೆರಿಬಿಯನ್ ಪ್ರವಾಸದಲ್ಲಿದೆ. ಉಭಯ ತಂಡಗಳ ನಡುವೆ 2 ಟೆಸ್ಟ್, 3 ಏಕದಿನ ಹಾಗೂ 5 ಟಿ20 ಪಂದ್ಯಗಳು ನಡೆಯಲಿವೆ. ಜುಲೈ 12-16 ರಿಂದ ವಿಂಡ್ಸರ್ ಪಾರ್ಕ್‌ನಲ್ಲಿ ನಡೆಯಲಿರುವ ಮೊದಲ ಟೆಸ್ಟ್‌ನೊಂದಿಗೆ ಪ್ರವಾಸ ಪ್ರಾರಂಭವಾಗುತ್ತದೆ. ಫ್ಲೋರಿಡಾದ ಲಾಡರ್ ಹಿಲ್‌ನಲ್ಲಿ ನಡೆಯಲಿರುವ 5ನೇ ಟಿ20 ಪಂದ್ಯದ ಬಳಿಕ ಆಗಸ್ಟ್ 13ರಂದು ಪ್ರವಾಸ ಮುಕ್ತಾಯವಾಗಲಿದೆ.
- ಆಗಸ್ಟ್ 2023 (ಭಾರತದ ಐರ್ಲೆಂಡ್ ಪ್ರವಾಸ): ಆಗಸ್ಟ್ ಮೂರನೇ ಮತ್ತು ನಾಲ್ಕನೇ ವಾರದಲ್ಲಿ ಭಾರತ ತಂಡವು 3 ಟಿ20 ಪಂದ್ಯಗಳನ್ನು ಆಡಲು ಐರ್ಲೆಂಡ್‌ಗೆ ಪ್ರವಾಸ ಮಾಡಬೇಕಾಗಿದೆ. ಆದಾಗ್ಯೂ, ಈ ಪ್ರವಾಸದಲ್ಲಿ ಭಾರತ ತನ್ನ ಬಿ ತಂಡವನ್ನು ಕಳುಹಿಸಬಹುದು ಎಂದು ಹೇಳಲಾಗುತ್ತಿದೆ.
- ಸೆಪ್ಟೆಂಬರ್ 2023 (ಏಷ್ಯಾ ಕಪ್ 2023): ಟೀಂ ಇಂಡಿಯಾ ಸೆಪ್ಟೆಂಬರ್‌ನಲ್ಲಿ ಏಷ್ಯಾ ಕಪ್ 2023 ರಲ್ಲಿ ಆಡಬೇಕಾಗಿದೆ. ವರದಿಗಳ ಪ್ರಕಾರ, ಏಷ್ಯಾ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (ಪಿಸಿಬಿ) ಹೈಬ್ರಿಡ್ ಮಾದರಿ ಒಪ್ಪಿಕೊಂಡಿದೆ. ಇದರಡಿಯಲ್ಲಿ, ಏಷ್ಯಾಕಪ್‌ನ 4 ಪಂದ್ಯಗಳಿಗೆ ಪಾಕಿಸ್ತಾನ ಆತಿಥ್ಯ ವಹಿಸಲಿದೆ. ಉಳಿದೆಲ್ಲ ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಲಿವೆ. ಭಾರತ ತನ್ನೆಲ್ಲ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡುತ್ತದೆ.
- ಸೆಪ್ಟೆಂಬರ್ 2023 (ಆಸ್ಟ್ರೇಲಿಯದ ಭಾರತ ಪ್ರವಾಸ): 2023ರ ವಿಶ್ವಕಪ್‌ಗೆ ತಯಾರಿ ನಡೆಸಲು ಆಸ್ಟ್ರೇಲಿಯಾ ತಂಡ ಸೆಪ್ಟೆಂಬರ್‌ನಲ್ಲಿ ಭಾರತಕ್ಕೆ ಪ್ರವಾಸ ಕೈಗೊಳ್ಳಲಿದೆ. ಈ ಪ್ರವಾಸದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ 3 ಪಂದ್ಯಗಳ ಏಕದಿನ ಸರಣಿ ನಡೆಯಲಿದೆ.
- ಸೆಪ್ಟೆಂಬರ್ 2023 (ಭಾರತದ ಅಫ್ಘಾನಿಸ್ತಾನ ಪ್ರವಾಸ): ಇಂಡಿಯನ್ ಪ್ರೀಮಿಯರ್ ಲೀಗ್ 2023 ರ ನಂತರ, ಅಫ್ಘಾನಿಸ್ತಾನವು ಏಕದಿನ ಸರಣಿಯನ್ನು ಆಡಲು ಭಾರತಕ್ಕೆ ಪ್ರವಾಸ ಮಾಡಬೇಕಿತ್ತು, ಆದರೆ ಟೀಂ ಇಂಡಿಯಾದ ಬಿಡುವಿಲ್ಲದ ವೇಳಾಪಟ್ಟಿ ಗಮನದಲ್ಲಿಟ್ಟುಕೊಂಡು ಸರಣಿಯನ್ನು ಮರುಹೊಂದಿಸಲಾಯಿತು. ವಿಶ್ವಕಪ್‌ಗೂ ಮುನ್ನ ಏಕದಿನ ಸರಣಿಯನ್ನು ಆಡಲು ಅಫ್ಘಾನಿಸ್ತಾನ ಸೆಪ್ಟೆಂಬರ್‌ನಲ್ಲಿ ಭಾರತಕ್ಕೆ ಪ್ರವಾಸ ಕೈಗೊಳ್ಳಲಿದೆ ಎಂದು ನಿರೀಕ್ಷಿಸಲಾಗಿದೆ. ಆದರೂ ಇದು ಇನ್ನೂ ದೃಢಪಟ್ಟಿಲ್ಲ.
- ಅಕ್ಟೋಬರ್- ನವೆಂಬರ್ 2023 (ಕ್ರಿಕೆಟ್ ವಿಶ್ವಕಪ್ 2023): ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ಅನ್ನು ಈ ವರ್ಷದ ಅಕ್ಟೋಬರ್-ನವೆಂಬರ್ ನಡುವೆ ಭಾರತದಲ್ಲಿ ಆಯೋಜಿಸಲಾಗುತ್ತದೆ. ಅದರ ವೇಳಾಪಟ್ಟಿ ಇನ್ನೂ ಬಿಡುಗಡೆಯಾಗಿಲ್ಲ. ಆದರೆ, ವರದಿಗಳ ಪ್ರಕಾರ ಅಕ್ಟೋಬರ್ 5ರಿಂದ ಆರಂಭವಾಗಲಿದ್ದು, ನವೆಂಬರ್ 19ರಂದು ಫೈನಲ್ ಪಂದ್ಯ ನಡೆಯಲಿದೆ. ಅಕ್ಟೋಬರ್ 15 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಉತ್ತಮ ಪಂದ್ಯ ನಡೆಯುವ ನಿರೀಕ್ಷೆ ಇದೆ.
- ನವೆಂಬರ್- ಡಿಸೆಂಬರ್ 2023 (ಆಸ್ಟ್ರೇಲಿಯಾ ವಿರುದ್ಧ ಭಾರತ ಟಿ20 ಸರಣಿ): ಕ್ರಿಕೆಟ್ ವಿಶ್ವಕಪ್ 2023ರ ಮುಕ್ತಾಯದ ನಂತರ, ನವೆಂಬರ್-ಡಿಸೆಂಬರ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ 5 ಪಂದ್ಯಗಳ ಟಿ20 ಸರಣಿ ನಡೆಯಲಿದೆ.
- ಡಿಸೆಂಬರ್-ಜನವರಿ (ಭಾರತದ ದಕ್ಷಿಣ ಆಫ್ರಿಕಾ ಪ್ರವಾಸ): 2023 ರ ಕೊನೆಯಲ್ಲಿ, ಭಾರತವು ದಕ್ಷಿಣ ಆಫ್ರಿಕಾ ಪ್ರವಾಸ ಮಾಡಬೇಕಾಗಿದೆ. ಈ ಪ್ರವಾಸವು ಡಿಸೆಂಬರ್‌ನಿಂದ ಪ್ರಾರಂಭವಾಗಲಿದ್ದು ಅದು ಜನವರಿ 2024 ರವರೆಗೆ ನಡೆಯಲಿದೆ. ಈ ವೇಳೆ ಉಭಯ ತಂಡಗಳ ನಡುವೆ 2 ಟೆಸ್ಟ್, 3 ಏಕದಿನ ಹಾಗೂ 3 ಟಿ20 ಪಂದ್ಯಗಳು ನಡೆಯಲಿವೆ.
ಇದನ್ನೂ ಓದಿ: India WTC Tour: ಭಾರತದ ಮುಂದಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಹಾದಿ ಹೀಗಿದೆ..