ಕೋಲ್ಕತ್ತಾ: ಭಾರತ ಮಹಿಳಾ ಕ್ರಿಕೆಟ್ ತಂಡದ ಮಾಜಿ ಆಟಗಾರ್ತಿ ರುಮೇಲಿ ಧಾರ್ ಅವರು ತಮ್ಮ 15 ವರ್ಷಗಳ ಕ್ರಿಕೆಟ್ ಬದುಕಿಗೆ ವಿರಾಮ ಹಾಕಿದ್ದಾರೆ. ಎಲ್ಲ ಅಂತಾರಾಷ್ಟ್ರೀಯ ಕ್ರಿಕೆಟ್ಗೂ ಅವರು ನಿವೃತ್ತಿ ಘೋಷಿಸಿದ್ದಾರೆ.
2003ರಲ್ಲಿ ಇಂಗ್ಲೆಂಡ್ ವಿರುದ್ಧ ಅಂತಾರಾಷ್ಟ್ರಿಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದು, 2018 ರವರೆಗೂ 4 ಟೆಸ್ಟ್, 78 ಏಕದಿನ ಮತ್ತು 18 ಟಿ20 ಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. 2012ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಪಂದ್ಯದಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಮಿಂಚಿ ಧಾರ್ ಆಲ್ರೌಂಡರ್ ಆಟಗಾರ್ತಿ ಎಂಬುದನ್ನು ಸಾಬೀತು ಮಾಡಿದ್ದರು.
ರುಮೇಲಿ ಧಾರ್ ಅವರು ಟೆಸ್ಟ್ ಕ್ರಿಕೆಟ್ನಲ್ಲಿ 29.50 ಸರಾಸರಿಯಲ್ಲಿ 236 ರನ್ ಗಳಿಸಿದ್ದಲ್ಲದೇ, 21.75 ಸರಾಸರಿಯಲ್ಲಿ 8 ವಿಕೆಟ್ ಪಡೆದಿದ್ದಾರೆ. ಏಕದಿನದಲ್ಲಿ 19.61 ರ ಸರಾಸರಿಯಲ್ಲಿ 6 ಅರ್ಧ ಶತಕಗಳ ಸಮೇತ 961 ರನ್ ಗಳಿಸಿದ್ದರೆ, 27.38 ರ ಸರಾಸರಿಯಲ್ಲಿ 63 ವಿಕೆಟ್ ಪಡೆದಿದ್ದಾರೆ. ಟಿ20ಯಲ್ಲಿ ಅಜೇಯ 66 ಅತ್ಯಧಿಕ ರನ್ ಜೊತೆಗೆ 131 ರನ್ ಗಳಿಸಿ, 13 ವಿಕೆಟ್‌ಗಳನ್ನು ಪಡೆದಿರುವುದು ಅವರ ಸಾಧನೆಯಾಗಿದೆ.
"ಪುನರಾವರ್ತಿತ ಗಾಯದ ಸಮಸ್ಯೆಯಿಂದ ಕ್ರಿಕೆಟ್ ಮುಂದುವರಿಸಲು ಸಾಧ್ಯವಾಗದ ಕಾರಣ 15 ವರ್ಷಗಳ ಕ್ರಿಕೆಟ್ ಬದುಕಿನಿಂದ ಹಿಂದೆ ಸರಿಯುತ್ತಿದ್ದೇನೆ. ನನ್ನ ವೃತ್ತಿಯಲ್ಲಿ ಸಹಕರಿಸಿದ ಎಲ್ಲರಿಗೂ ಪ್ರೀತಿಯ ಧನ್ಯವಾದಗಳು" ಎಂದು ರುಮೇಲಿ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ವಿರಾಟ್ ಅವಾಯ್ಡ್ ಕ್ಯಾಪ್ಟನ್ಸಿ, ಬಟ್ ಕ್ಯಾಪ್ಟನ್ಸಿ ಲೈಕ್ಸ್ ಕೊಹ್ಲಿ: ವಿಡಿಯೋ