ಅಹ್ಮದಾಬಾದ್: ವಿಂಡೀಸ್ ವಿರುದ್ಧ 2ನೇ ಏಕದಿನ ಪಂದ್ಯದಲ್ಲಿ ವಿಕೆಟ್ ಕೀಪರ್ ರಿಷಭ್ ಪಂತ್ ಅವರನ್ನು ಆರಂಭಿಕ ಸ್ಥಾನದಲ್ಲಿ ಕಣಕ್ಕಿಳಿಸಿದ್ದು ಒಂದು ಪ್ರಯೋಗವಷ್ಟೇ, ಖಾಯಂ ಆರಂಭಿಕ ಮುಂದಿನ ಪಂದ್ಯದಲ್ಲಿ ಶಿಖರ್ ಧವನ್ ತಮ್ಮ ಸ್ಥಾನಕ್ಕೆ ಮರಳಲಿದ್ದಾರೆ ಎಂದು ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.
ಬುಧವಾರ ನಡೆದ 2ನೇ ಏಕದಿನ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಅರ್ಧಶತಕ(64) ಮತ್ತು ಪ್ರಸಿಧ್ ಕೃಷ್ಣ ಅವರ(12ಕ್ಕೆ4) ಅದ್ಭುತ ಬೌಲಿಂಗ್ ನೆರವಿನಿಂದ ಭಾರತ ತಂಡ ವೆಸ್ಟ್ ಇಂಡೀಸ್ ವಿರುದ್ಧ 44 ರನ್ಗಳ ಗೆಲುವು ಸಾಧಿಸಿ 2-0ಯಲ್ಲಿ 3 ಪಂದ್ಯಗಳ ಏಕದಿನ ಸರಣಿಯನ್ನು ವಶಪಡಿಸಿಕೊಂಡಿತ್ತು.
ಇನ್ನು ಈ ಪಂದ್ಯದಲ್ಲಿ ರಿಷಭ್ ಪಂತ್ ಅವರನ್ನು ಆರಂಭಿಕನಾಗಿ ಕಣಕ್ಕಿಳಿಸುವ ಮೂಲಕ ರೋಹಿತ್ ಶರ್ಮಾ ಆಶ್ಚರ್ಯಕರ ನಿರ್ಧಾರ ತೆಗೆದುಕೊಂಡಿದ್ದರು. ಪಂತ್ ಭಾರತ ತಂಡದ ಪರ ಇದೇ ಮೊದಲ ಬಾರಿಗೆ ಆರಂಭಿಕನಾಗಿ ಕಣ್ಣಕ್ಕಿಳಿದಿದ್ದರು. ಆದರೆ ಕೇವಲ 18 ರನ್ಗಳಿಗೆ ವಿಕೆಟ್ ಒಪ್ಪಿಸಿದ್ದರು.
"ಮ್ಯಾನೇಜ್ಮೆಂಟ್ನಿಂದ ನನಗೆ ವಿಭಿನ್ನ ವಿಷಯಗಳನ್ನು ಮಾಡಲು ಹೇಳಲಾಗಿದೆ. ಆದ್ದರಿಂದ ನಾನು ವಿಶೇಷ ನಿರ್ಧಾರ ತೆಗೆದುಕೊಂಡೆ (ಪಂತ್ ಆರಂಭಿಕನನ್ನಾಗಿ ಕಣಕ್ಕಿಳಿಸಿದ್ದು). ಇದನ್ನು ನಾವು ಒಂದು ಪಂದ್ಯಕ್ಕೆ ಪ್ರಯತ್ನಿಸಲು ಮಾತ್ರ ಬಯಸಿದ್ದೆವೆ, ಇದೇನು ಶಾಶ್ವತ ನಿರ್ಧಾರವಲ್ಲ. ಶಿಖರ್ ಧವನ್ ಮುಂದಿನ ಪಂದ್ಯದ ವೇಳೆ ತಂಡಕ್ಕೆ ಮರಳಲಿದ್ದಾರೆ. ಆದರೆ ನಾವು ಇಂತಹ ಕೆಲವು ಪ್ರಯೋಗಗಳನ್ನು ಮಾಡುವುದರಿಂದ ಒಂದಷ್ಟು ಪಂದ್ಯಗಳನ್ನು ಕಳೆದುಕೊಂಡರೂ ಚಿಂತಿಸುವುದಿಲ್ಲ, ಏಕೆಂದರೆ ದೀರ್ಘಾವಧಿಗೆ ತಂಡವನ್ನು ಬಲಿಷ್ಠಗೊಳಿಸುವ ಉದ್ದೇಶ ಮುಖ್ಯವಾಗಿದೆ" ಎಂದು ರೋಹಿತ್ ಪಂದ್ಯದ ನಂತರ ನಡೆದ ಹೇಳಿದ್ದಾರೆ.
ಇದನ್ನೂ ಓದಿ: ಶಿಖರ್ ಧವನ್ ಕಮ್ಬ್ಯಾಕ್ ಬಲ, ಸರಣಿ ವೈಟ್ವಾಷ್ ಮಾಡುವತ್ತ ಕಣ್ಣಿಟ್ಟ ಭಾರತ