ಕೊಲಂಬೊ: ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದ ಶ್ರೀಲಂಕಾದ ಕೆಲ ಸಿಬ್ಬಂದಿಯಲ್ಲಿ ಕೊರೊನಾ ವೈರಸ್ ಕಾಣಿಸಿಕೊಂಡಿದ್ದು, ಇದೀಗ ಭಾರತ-ಶ್ರೀಲಂಕಾ ನಡುವಿನ ಕ್ರಿಕೆಟ್ ಸರಣಿ ಮೇಲೆ ಇನ್ನಿಲ್ಲದ ಪರಿಣಾಮ ಬೀರಿದೆ. ಟೂರ್ನಿ ಆರಂಭಗೊಳ್ಳಲು ಕೇವಲ ಮೂರು ದಿನಗಳ ಕಾಲ ಬಾಕಿ ಉಳಿದಿರುವ ಕಾರಣ ಮತ್ತೊಂದು ತಂಡ ಕಣಕ್ಕಿಳಿಸಲು ಲಂಕಾ ಬೋರ್ಡ್ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಶ್ರೀಲಂಕಾ ತಂಡದ ಬ್ಯಾಟಿಂಗ್ ಕೋಚ್ ಗ್ರಾಂಟ್ ಫ್ಲವರ್ ಈಗಾಗಲೇ ಕೊರೊನಾ ಸೋಂಕಿಗೊಳಗಾಗಿದ್ದು, ಇದೀಗ ತಂಡದ ವಿಶ್ಲೇಷಕ ಶ್ರೀನಾಥ್ ನಿರೋಶನ್ಗೂ ಸೋಂಕು ದೃಢಗೊಂಡಿದೆ. ಇವರು ಲಂಕಾ ತಂಡದೊಂದಿಗೆ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದರಿಂದ ಇದೀಗ ಎಲ್ಲ ಪ್ಲೇಯರ್ಸ್ ಹಾಗೂ ಸಿಬ್ಬಂದಿ ಕ್ವಾರಂಟೈನ್ಗೆ ಒಳಗಾಗಬೇಕಾಗಿದೆ.
ಇದನ್ನೂ ಓದಿರಿ: ನೆಲಕಚ್ಚಿದ ಶ್ರೀಲಂಕಾ ಕ್ರಿಕೆಟ್ ತಂಡ: ಸಂಭಾವನೆ ಪಡೆಯದೆ ತಂಡ ಕಟ್ಟಲು ಪಣತೊಟ್ಟ ಜಯವರ್ಧನೆ
ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದ ಲಂಕಾದ ಎಲ್ಲ ಪ್ಲೇಯರ್ಸ್ ಇದೀಗ ಕ್ವಾರಂಟೈನ್ಗೆ ಒಳಗಾಗಬೇಕಾಗಿರುವ ಕಾರಣ ಜುಲೈ 13ರಂದು ನಡೆಯಲಿರುವ ಮೊದಲ ಪಂದ್ಯದಲ್ಲಿ ಸಿಂಹಳೀಯರ ಬೇರೆ ತಂಡ ಕಣಕ್ಕಿಳಿಸಲು ಲಂಕಾ ಬೋರ್ಡ್ ನಿರ್ಧಾರ ಕೈಗೊಂಡಿದೆ. ಶ್ರೀಲಂಕಾ ಬಿ ತಂಡ ಈಗಾಗಲೇ ಬಯೋ ಬಬಲ್ನಲ್ಲಿದ್ದು, ಯಾವುದೇ ಆಟಗಾರ ಇಂಗ್ಲೆಂಡ್ಗೆ ಪ್ರವಾಸ ಕೈಗೊಂಡಿಲ್ಲ. ಹೀಗಾಗಿ ಇದೇ ತಂಡವನ್ನು ಮೈದಾನಕ್ಕಿಳಿಸುವ ಸಾಧ್ಯತೆ ಇದೆ.
ಇದನ್ನೂ ಓದಿರಿ: ಮೈಕ್ರೋಸಾಫ್ಟ್ ಉದ್ಯೋಗಿಗಳಿಗೆ ಬಂಪರ್: ಪ್ರತಿ ಉದ್ಯೋಗಿಯ ಖಾತೆ ಸೇರಿದ ಬೋನಸ್ ಎಷ್ಟು ಗೊತ್ತೇ?
ಟೀಂ ಇಂಡಿಯಾದ ಪ್ರಮುಖ ಪ್ಲೇಯರ್ಸ್ಗಳಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ, ಜಡೇಜಾ ಸೇರಿದಂತೆ ಪ್ರಮುಖ ಆಟಗಾರರು ಸದ್ಯ ಇಂಗ್ಲೆಂಡ್ನಲ್ಲಿದ್ದು, ಇದರ ಮಧ್ಯೆ ಅನುಭವಿ ಹಾಗೂ ಅನನುಭವಿ ಪ್ಲೇಯರ್ಸ್ಗಳಿಂದ ಕೂಡಿದ್ದ ತಂಡ ಲಂಕಾ ಪ್ರವಾಸದಲ್ಲಿದೆ. ಕ್ಯಾಪ್ಟನ್ ಶಿಖರ್ ಧವನ್, ಬೌಲರ್ ಭುವನೇಶ್ವರ್ ಕುಮಾರ್, ಮನೀಷ್ ಪಾಂಡೆ, ಹಾರ್ದಿಕ್ ಪಾಂಡ್ಯಾ ಜೊತೆಗೆ ಪೃಥ್ವಿ ಶಾ, ದೇವದತ್ ಪಡಿಕ್ಕಲ್ ಸೇರಿದಂತೆ ಅನೇಕ ಪ್ಲೇಯರ್ಸ್ ಇದ್ದಾರೆ.