ಜೈಪುರ್(ರಾಜಸ್ಥಾನ): ಟೀಂ ಇಂಡಿಯಾ ನೂತನ ಕೋಚ್ ಆಗಿ ಆಯ್ಕೆಯಾಗಿರುವ ರಾಹುಲ್ ದ್ರಾವಿಡ್ (Coach Rahul Dravid) ಇದೀಗ ತಂಡ ಸೇರಿಕೊಂಡಿದ್ದು, ಅವರ ಗರಡಿಯಲ್ಲಿ ರೋಹಿತ್ ಪಡೆ ಅಭ್ಯಾಸ ಶುರು ಮಾಡಿದೆ.
ನವೆಂಬರ್ 17ರಿಂದ ಟೀಂ ಇಂಡಿಯಾ ಜೈಪುರ್ನ ಸವಾಯಿ ಮಾನ್ಸಿಂಗ್ ಮೈದಾನದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ಭಾಗಿಯಾಗಲಿದ್ದು, ಅದಕ್ಕಾಗಿ ಕೇವಲ ಎರಡು ದಿನ ಬಾಕಿ ಇರುವ ಕಾರಣ ತಂಡ ನೆಟ್ ಅಭ್ಯಾಸ ಆರಂಭಿಸಿದೆ.
ಮುಖ್ಯ ಕೋಚ್ ದ್ರಾವಿಡ್ ಜೊತೆಗೆ ಬ್ಯಾಟಿಂಗ್ ಕೋಚ್ ವಿಕ್ರಂ ರಾಥೋರ್ ಹಾಗೂ ಬೌಲಿಂಗ್ ಕೋಚ್ ಪಾರಸ್ ಮಾಂಬ್ರೆ ಕೂಡ ರೋಹಿತ್ ಬಾಯ್ಸ್ಗೆ ತರಬೇತಿ ನೀಡುತ್ತಿದ್ದಾರೆ.
ಇದನ್ನೂ ಓದಿ: IND vs NZ T20: ಪಂದ್ಯ ವೀಕ್ಷಣೆಗೆ ಟಿಕೆಟ್ ಜೊತೆ RT-PCR ವರದಿ, ಲಸಿಕೆ ಪ್ರಮಾಣಪತ್ರ ಕಡ್ಡಾಯ
ತರಬೇತಿ ವೇಳೆ ಆರ್.ಅಶ್ವಿನ್, ದೀಪಕ್ ಚಹರ್, ಮೊಹಮ್ಮದ್ ಸಿರಾಜ್, ರಿಷಭ್ ಪಂತ್, ಯಜುಚೇಂದ್ರ ಚಹಲ್, ಭುವನೇಶ್ವರ್ ಕುಮಾರ್, ಇಶನ್ ಕಿಶನ್, ಅಕ್ಸರ್ ಪಟೇಲ್ ಹಾಜರಿದ್ದರು. ಕ್ಯಾಪ್ಟನ್ ರೋಹಿತ್ ಶರ್ಮಾ ಬ್ಯಾಟಿಂಗ್ ಕೋಚ್ ವಿಕ್ರಂ ರಾಥೋರ್ ಜೊತೆ ಹೆಚ್ಚಿನ ಸಮಯ ಕಳೆದರು. ಟೀಂ ಇಂಡಿಯಾ (Team India) ಕ್ರಮವಾಗಿ ನವೆಂಬರ್ 17, 19 ಹಾಗೂ 21ರಂದು ಮೂರು ಟಿ20 ಪಂದ್ಯಗಳಲ್ಲಿ ಭಾಗಿಯಾಗಲಿದ್ದು, ತದನಂತರ ಟೆಸ್ಟ್ ಸರಣಿ ಆರಂಭವಾಗಲಿದೆ.
ಮೊದಲ ಟಿ20 ಪಂದ್ಯ ರಾಜಸ್ಥಾನದ ಸವಾಯಿ ಮಾನ್ಸಿಂಗ್ (SMS Stadium Jaipur) ಮೈದಾನದಲ್ಲಿ ನವೆಂಬರ್ 17ರಂದು ಆರಂಭಗೊಳ್ಳಲಿದೆ. ಟಿ20 ಸರಣಿಗಾಗಿ ರೋಹಿತ್ ಶರ್ಮಾ ಕ್ಯಾಪ್ಟನ್ ಆಗಿದ್ದು, ಕನ್ನಡಿಗ ಕೆ.ಎಲ್. ರಾಹುಲ್ ಉಪನಾಯಕರಾಗಿ ಈಗಾಗಲೇ ಆಯ್ಕೆಯಾಗಿದ್ದಾರೆ.