ಸೌತಾಂಪ್ಟನ್: ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯ ಮಳೆಯೊಂದಿಗಿನ ಜಂಜಾಟವಾಗುತ್ತಿದ್ದು, 4 ದಿನಗಳಲ್ಲಿ 360 ಓವರ್ಗಳ ಬದಲಾಗಿ ಕೇವಲ 141.1 ಓವರ್ಗಳ ಆಟ ನಡೆದಿದೆ. ಇದು ಕ್ರಿಕೆಟ್ ಅಭಿಮಾನಿಗಳಿಗಷ್ಟೇ ಅಲ್ಲದೇ ಮಾಜಿ ಕ್ರಿಕೆಟರ್ಗಳಿಗೂ ಅಸಮಾಧಾನ ತಂದಿದೆ. ಇಂಗ್ಲೆಂಡ್ ತಂಡದ ಮಾಜಿ ನಾಯಕ ಕೆವಿನ್ ಪೀಟರ್ಸನ್ ಮಹತ್ವದ್ದಾಗಿರುವ ಯಾವುದೇ ಪಂದ್ಯಗಳು ಇಂಗ್ಲೆಂಡ್ನಲ್ಲಿ ನಡೆಯಬಾರದು ಎಂದು ಹೇಳುವ ಮೂಲಕ ತಮ್ಮ ನಿರಾಸೆಯನ್ನು ವ್ಯಕ್ತಪಡಿಸಿದ್ದಾರೆ.
ಈಗಾಗಲೇ WTC ಫೈನಲ್ ಪಂದ್ಯದ 4 ದಿನಗಳು ಮುಗಿದಿವೆ. ಇದರಲ್ಲಿ ಸಂಪೂರ್ಣ 2 ದಿನಗಳ ಆಟ ಮಳೆಗಾಹುತಿಯಾದರೆ, ಮತ್ತೆರಡು ದಿನ ಆಟ ನಡೆದರೂ ಓವರ್ಗಳನ್ನು ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಅದಕ್ಕಾಗಿ ಪೀಟರ್ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯಕ್ಕೆ ದುಬೈ ಸೂಕ್ತ ಸ್ಥಳವಾಗಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದನ್ನು ಹೇಳಲು ನನಗೆ ನೋವಾಗುತ್ತಿದೆ, ಆದರೂ ಅತ್ಯಂತ ಪ್ರಮುಖವಾಗಿರುವ ಕ್ರಿಕೆಟ್ ಪಂದ್ಯಗಳು ಇಂಗ್ಲೆಂಡ್ನಲ್ಲಿ ನಡೆಯಬಾರದು ಎಂದು ಪೀಟರ್ಸನ್ ಟ್ವೀಟ್ ಮಾಡಿದ್ದಾರೆ.
ನನ್ನ ಪ್ರಕಾರ ದುಬೈ WTC ಫೈನಲ್ನಂತಹ ಪ್ರಮುಖ ಪಂದ್ಯವನ್ನು ಆಯೋಜಿಸಬೇಕು. ತಟಸ್ಥ ಸ್ಥಳ, ಅಸಾಧಾರಣ ಕ್ರೀಡಾಂಗಣ, ಖಾತರಿಯ ಹವಾಮಾನ, ಅತ್ಯುತ್ತಮ ತರಬೇತಿ ಸೌಲಭ್ಯಗಳು ಮತ್ತು ಪ್ರಯಾಣ ಕೇಂದ್ರ, ಐಸಿಸಿ ಕೇಂದ್ರವೂ ಕೂಡ ಪಕ್ಕದಲ್ಲಿದೆ ಎಂದು ಪೀಟರ್ಸನ್ ಮತ್ತೊಂದು ಟ್ವೀಟ್ನಲ್ಲಿ ಬರೆದು ಕೊಂಡಿದ್ದಾರೆ.
ಕೈಲ್ ಜೆಮೀಸನ್ ದಾಳಿಗೆ ತತ್ತರಿಸಿದ ಭಾರತ ತಂಡ ತನ್ನ ಮೊದಲ ಇನ್ನಿಂಗ್ಸ್ನಲ್ಲಿ 217 ರನ್ಗಳಿಗೆ ಆಲೌಟ್ ಆದರೆ, ನ್ಯೂಜಿಲ್ಯಾಂಡ್ ಮೊದಲ ಇನ್ನಿಂಗ್ಸ್ನಲ್ಲಿ 2 ವಿಕೆಟ್ ಕಳೆದುಕೊಂಡು 102 ರನ್ಗಳಿಸಿದೆ. ಡಿವೋನ್ ಕಾನ್ವೆ 54 ಮತ್ತು ಟಾಮ್ ಲಾಥಮ್ 30 ರನ್ಗಳಿಸಿ ವಿಕೆಟ್ ಒಪ್ಪಿಸಿದರೆ, ವಿಲಿಯಮ್ಸನ್ ಅಜೇಯ 12 ಮತ್ತು ರಾಸ್ ಟೇಲರ್ ಖಾತೆ ತೆರೆಯದೇ ಕ್ರೀಸ್ನಲ್ಲಿದ್ದಾರೆ.
ಇನ್ನೆರೆಡು ದಿನಗಳ ಆಟ ಬಾಕಿ:
ಈಗಾಗಲೇ 4 ದಿನಗಳು ಮುಗಿದಿವೆ. ಆದರೆ, ಕೇವಲ 141 ಓವರ್ ಮಾತ್ರ ಮುಗಿದೆ. ಮೀಸಲು ದಿನ ಸೇರಿದರೂ ಇನ್ನು 180 ಓವರ್ಗಳ ಆಟ ನಡೆಯಬಹುದಾಗಿದೆ. ಇಷ್ಟು ಓವರ್ಗಳಲ್ಲಿ ಪಂದ್ಯದ ಫಲಿತಾಂಶ ಪಡೆಯುವುದು ತುಂಬಾ ಕಷ್ಟವಾಗಲಿದೆ. ಅಲ್ಲದೇ ಈ ಎರಡು ದಿನಕ್ಕೂ ಮಳೆಯ ಕಾಟ ಇದ್ದೇ ಇರಲಿದೆ. ಒಟ್ಟಿನಲ್ಲಿ ಈ ಪಂದ್ಯ ಡ್ರಾನಲ್ಲಿ ಅಂತ್ಯವಾಗುವುದು ಬಹುತೇಕ ಖಚಿತವಾಗಿದೆ. ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಜಂಟಿ ವಿಜೇತರನ್ನು ಕಾಣಬಹುದಾಗಿದೆ.
ಇದನ್ನು ಓದಿ:WTC ಫೈನಲ್: 4ನೇ ದಿನದಾಟವೂ ಮಳೆಗಾಹುತಿ, ಡ್ರಾನತ್ತ ಸಾಗಿದೆ ಟೆಸ್ಟ್