ನವದೆಹಲಿ: ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ-20 ವಿಶ್ವಕಪ್‌ಗೆ ವಿರಾಟ್ ಕೊಹ್ಲಿ ಅವರನ್ನು ಕೈಬಿಡಲು ಭಾರತ ನಿರ್ಧರಿಸಿದರೆ, ಮತ್ತೆ ತಂಡಕ್ಕೆ ಮರಳಲು ಅವರಿಗೆ ಯಾವುದೇ ಮಾರ್ಗವಿಲ್ಲ ಎಂದು ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಅಭಿಪ್ರಾಯಪಟ್ಟಿದ್ದಾರೆ. ನವೆಂಬರ್ 2019 ರಿಂದ ಕೊಹ್ಲಿ ಒಂದೂ ಶತಕ ಗಳಿಸಿಲ್ಲ. ಈ ವರ್ಷದ ಐಪಿಎಲ್‌ನಲ್ಲಿ ರನ್ ಗಳಿಸಲು ಹೆಣಗಾಡಿದ ಅವರು, ಇತ್ತೀಚೆಗೆ ಮುಕ್ತಾಯಗೊಂಡ ಇಂಗ್ಲೆಂಡ್ ಪ್ರವಾಸದಲ್ಲಿ ಹೇಳಿಕೊಳ್ಳುವಂಥ ಬ್ಯಾಟಿಂಗ್ ಪ್ರದರ್ಶನ ನೀಡಲು ವಿಫಲರಾಗಿದ್ದಾರೆ.
ಟೀಂ ಇಂಡಿಯಾದಿಂದ ಕೊಹ್ಲಿ ಅವರನ್ನು ಕೈಬಿಡಬೇಕು ಎಂಬ ಒತ್ತಾಯಗಳು ಆಗಾಗ ಕೇಳಿ ಬರುತ್ತಿವೆ. ಆದರೆ, ತಾವೇನಾದರೂ ಟೀಂ ಇಂಡಿಯಾ ಆಯ್ಕೆ ಮಾಡುವ ಅಧಿಕಾರ ಹೊಂದಿದ್ದರೆ, ಕೊಹ್ಲಿ ಮರಳಿ ಆತ್ಮವಿಶ್ವಾಸ ಪಡೆಯುವವರೆಗೂ ಅವರನ್ನು ತಂಡದಲ್ಲಿ ಉಳಿಸಿಕೊಳ್ಳುತ್ತಿದ್ದೆ ಎಂದು ಪಾಂಟಿಂಗ್ ಹೇಳಿದ್ದಾರೆ.
ಒಂದೊಮ್ಮೆ ವಿರಾಟ್ ಅವರನ್ನು ವಿಶ್ವಕಪ್ ನಿಂದ ಕೈಬಿಟ್ಟರೆ ಮತ್ತು ಅವರ ಜಾಗದಲ್ಲಿ ಬಂದವರು ಉತ್ತಮ ಪ್ರದರ್ಶನ ತೋರಿದಲ್ಲಿ ವಿರಾಟ್ ತಂಡಕ್ಕೆ ಮರಳುವುದು ಕಷ್ಟವಾಗಬಹುದು ಎಂದು ಐಸಿಸಿ ರಿವ್ಯೂ ಎಪಿಸೋಡ್ನಲ್ಲಿ ಪಾಂಟಿಂಗ್ ಹೇಳಿದ್ದಾರೆ.
ನಾನು ಭಾರತವಾಗಿದ್ದಲ್ಲಿ, ಅವರ ಬೆಂಬಲಕ್ಕೆ ನಿಂತಿರುತ್ತಿದ್ದೆ. ಏಕೆಂದರೆ ಕೊಹ್ಲಿ ಸಾಮರ್ಥ್ಯ ನನಗೆ ಗೊತ್ತಿದೆ. ಅವರು ತಮ್ಮ ಆತ್ಮವಿಶ್ವಾಸ ಮರಳಿ ಪಡೆಯುವಂತಾದರೆ ತಮ್ಮ ಸಂಪೂರ್ಣ ಸಾಮರ್ಥ್ಯದಿಂದ ಅವರು ಆಡಲಾರಂಭಿಸಬಹುದು. ಅವರ ಜೀವನವನ್ನು ಎಷ್ಟು ಸಾಧ್ಯವೋ ಅಷ್ಟು ನೆಮ್ಮದಿಯುತವಾಗಿ ನಾನು ಮಾಡುತ್ತಿದ್ದೆ ಎಂದು ಪಾಂಟಿಂಗ್ ತಿಳಿಸಿದ್ದಾರೆ.
ಕೊಹ್ಲಿ ಅವರನ್ನು ಆರಂಭಿಕರಾಗಿ ಆಡಿಸಲು ಆಯ್ಕೆಗಾರರು ಪ್ರಯತ್ನಿಸಬೇಕು. ಇಡೀ ಟಿ20 ವಿಶ್ವಕಪ್ ಪಂದ್ಯಾವಳಿಯುದ್ದಕ್ಕೂ ಅವರನ್ನು ಅದೇ ಕ್ರಮಾಂಕದಲ್ಲಿ ಆಡಲು ಬಿಡಬೇಕು ಎಂದು ಅವರು ಸಲಹೆ ನೀಡಿದ್ದಾರೆ.
ಇದನ್ನು ಓದಿ:ಲಾರ್ಡ್ಸ್ ಮೈದಾನದಲ್ಲಿ ದ್ವಿಶತಕ ಸಿಡಿಸಿ ಮಿಂಚಿದ ಪೂಜಾರ.. ನಾಯಕನಾದ ಮೊದಲ ಪಂದ್ಯದಲ್ಲೇ ಮಿಂಚಿನ ಬ್ಯಾಟಿಂಗ್