ದುಬೈ : ಕಳೆದ ಎರಡು ಐಪಿಎಲ್ ಆವೃತ್ತಿಗಳಲ್ಲಿ ಒಬ್ಬ ಬ್ಯಾಟ್ಸ್ಮನ್ ಆಗಿ ಧೋನಿ ವೈಫಲ್ಯ ಅನುಭವಿಸಿದ್ದಾರೆ. ಒಂದು ಕಾಲದಲ್ಲಿ ಸ್ಫೋಟಕ ಬ್ಯಾಟ್ಸ್ಮನ್ ಆಗಿದ್ದ ಧೋನಿ ಚೆನ್ನೈಗೆ ಸೋಲುವ ಅದೆಷ್ಟೋ ಪಂದ್ಯಗಳನ್ನು ಏಕಾಂಗಿಯಾಗಿ ಹೋರಾಡಿ ಗೆಲ್ಲಿಸಿಕೊಟ್ಟಿದ್ದಾರೆ.
ಆದರೆ, ಅದೆಲ್ಲಾ ಈಗ ಮುಗಿದು ಹೋದ ಕಥೆಯಾಗಿದೆ. ಧೋನಿ ಹಿಂದಿನ ಧೋನಿಯಾಗಿ ಉಳಿದಿಲ್ಲ. ಅವರಿಗೆ 40 ವರ್ಷಗಳೂ ಮುಗಿದ್ದಿದ್ದು, ಮುಂದಿನ ವರ್ಷ ಐಪಿಎಲ್ನಲ್ಲಿ ಆಡುವುದು ಅನುಮಾನ ಎನ್ನಲಾಗುತ್ತಿದೆ.
2008ರಿಂದ 2021ರವರೆಗೆ 12 ಬಾರಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಧೋನಿ ಮುನ್ನಡೆಸಿದ್ದಾರೆ. ಸಿಎಸ್‌ಕೆ 11 ಬಾರಿ ಪ್ಲೇ ಆಫ್ ಹಂತ ತಲುಪಿದೆ. 8 ಬಾರಿ ಫೈನಲ್ಗೆ ಕೊಂಡೊಯ್ದಿದ್ದಾರೆ. ಆದರೆ, 2020ರಲ್ಲಿ ಮಾತ್ರ ಸಿಎಸ್‌ಕೆ ದಯನೀಯ ವೈಫಲ್ಯ ಅನುಭವಿಸಿತು. ಐಪಿಎಲ್ ಇತಿಹಾಸದಲ್ಲಿ ಮೊದಲ ಬಾರಿಗೆ ಪ್ಲೇ ಆಫ್ ರೇಸ್ನಿಂದ ಹೊರ ಬಿದ್ದಿದ್ದಲ್ಲದೆ, ಮೊದಲ ತಂಡವಾಗಿಯೂ ಹೊರಬಿದ್ದಿದ್ದು ಕ್ರಿಕೆಟ್ ಅಭಿಮಾನಿಗಳಿಗೆ ಅಚ್ಚರಿ ತಂದಿತ್ತು.
ಧೋನಿ ಕೂಡ 14 ಪಂದ್ಯಗಳಲ್ಲಿ ಕೇವಲ 200 ರನ್ ಬಾರಿಸಿದ್ದರು. ಆದರೆ, ಈ ವರ್ಷ ಅದಕ್ಕಿಂತಲೂ ಕೆಟ್ಟ ಪ್ರದರ್ಶನವಾಗಿದೆ. ಆದರೆ, ಹಿಂದಿನ ಲೀಗ್ಗಳ ಹಾಗೆ ಅವರು ತಾವೂ 4 ಅಥವಾ 5ರಲ್ಲಿ ಬ್ಯಾಟಿಂಗ್ಗೆ ಬಾರದೇ 6 ಅಥವಾ 7ರಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾರೆ. 12 ಪಂದ್ಯಗಳಲ್ಲಿ ಕೇವಲ 66 ರನ್ಗಳಿಸಿದ್ದಾರೆ. ಹಾಗಾಗಿ, ಬಹುಪಾಲು ಕ್ರಿಕೆಟ್ ತಜ್ಞರು ಧೋನಿಗೆ ಇದೇ ಕೊನೆಯ ಲೀಗ್ ಆಗಬಹುದು ಎನ್ನುತ್ತಿದ್ದಾರೆ.
"ಅವರು ಚೆನ್ನೈ ಸೂಪರ್ ಕಿಂಗ್ಸ್ ಬಾಸ್. ನೀವು ಚೆನ್ನೈ ಎಂದರೆ, ನೀವು ಎಂಎಸ್ ಧೋನಿ ಎಂದೇ ಭಾವಿಸುತ್ತೀರಿ. ಅವರು ಕೇವಲ ಒಂದೆರಡು ಪಂದ್ಯಗಳನ್ನು ಹೊಂದಿದ್ದಾರೆ ಮತ್ತು ಈಗಾಗಲೇ ಫೈನಲ್ಸ್(ಕ್ವಾಲಿಫೈಯರ್) ಪ್ರವೇಶಿಸಿದ್ದಾರೆ. ಆದರೆ, ಈವರೆಗೂ ಧೋನಿ ಏನು ಮಾಡದಿರುವುದನ್ನು ನೋಡಿದ್ದೇವೆ. ಒಂದು ವೇಳೆ ಅವರು ಫೈನಲ್ನಲ್ಲಿ ಏನಾದರೂ ಜಯದ ರನ್ಗಳನ್ನು ಬಾರಿಸಿದರೆ, ಅವರು ಮುಂದಿನ ವರ್ಷದ ಐಪಿಎಲ್ನಲ್ಲೂ ಗ್ಲೌಸ್ ತೊಡಲಿದ್ದಾರೆ ಎನ್ನುವುದನ್ನು ನೀವು ಖಚಿತಪಡಿಸಿಕೊಳ್ಳಬಹುದು" ಎಂದು ದಕ್ಷಿಣ ಆಫ್ರಿಕಾದ ಲೆಜೆಂಡರಿ ಬೌಲರ್ ಡೇಲ್ ಸ್ಟೇನ್ ಇಸ್ಪಿಎನ್ಗೆ ತಿಳಿಸಿದ್ದಾರೆ.
ಆದರೆ, ಸಿಎಸ್‌ಕೆ ತಂಡಕ್ಕೆ ಧೋನಿ ಬ್ಯಾಟಿಂಗ್ ವೈಫಲ್ಯ ಎಳ್ಳಷ್ಟು ಸಮಸ್ಯೆಯಾಗಿಲ್ಲ. ಅವರ ನಾಯಕತ್ವ ಲೀಗ್ನಲ್ಲೇ ಅತ್ಯುತ್ತಮವಾಗಿದೆ. ಅಲ್ಲದೆ ತಂಡ ಕೂಡ ಸಮತೋಲನದಿಂದ ಕೂಡಿದೆ. ಹಾಗಾಗಿ, ಲೀಗ್ನಲ್ಲಿ ಅಗ್ರಸ್ಥಾನವಾಗಿ ಉಳಿದುಕೊಂಡಿದೆ. ಇನ್ನು, ಸೋತಿರುವ ಪಂದ್ಯಗಳಲ್ಲೂ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿದೆ. ಹಾಗಾಗಿ, ಧೋನಿ ನಾಯಕತ್ವದಲ್ಲಿ ಸಿಎಸ್‌ಕೆ ತನ್ನ 4ನೇ ಟ್ರೋಫಿ ಗೆದ್ದರೆ ಮುಂದಿನ ವರ್ಷವೂ ಚೆನ್ನೈ ನೇತೃತ್ವವಹಿಸುವ ಸಾಧ್ಯತೆಯಿದೆ.
ಇದನ್ನು ಓದಿ:ಸಿಎಸ್‌ಕೆ vs ಡೆಲ್ಲಿ: ಅಗ್ರಸ್ಥಾನಕ್ಕಾಗಿ ಪೈಪೋಟಿ, ಗೆದ್ದವರಿಗೆ ಫೈನಲ್ ಪ್ರವೇಶಿಸಲು 2 ಅವಕಾಶ