ಮುಂಬೈ: ಏಕದಿನ ಕ್ರಿಕೆಟ್ ವಿಶ್ವಕಪ್ ಫೈನಲ್ ಮಹಾಪಂದ್ಯಕ್ಕೆ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂ ಸಿದ್ಧಗೊಂಡಿದೆ. ನವೆಂಬರ್ 19ರಂದು ನಡೆಯಲಿರುವ ಫೈನಲ್‌ನಲ್ಲಿ ಆಸ್ಟ್ರೇಲಿಯಾ ಮತ್ತು ಭಾರತ ಮುಖಾಮುಖಿಯಾಗಲಿವೆ. ಈ ಮೈದಾನದಲ್ಲಿ ಹಿಂದೊಮ್ಮೆ ಆಸ್ಟ್ರೇಲಿಯಾ ವಿರುದ್ಧ ಭಾರತ ಮೇಲುಗೈ ಸಾಧಿಸಿತ್ತು.
2011ರ ವಿಶ್ವಕಪ್ ಕ್ವಾರ್ಟರ್ ಫೈನಲ್‌ನಲ್ಲಿ ಆಸ್ಟ್ರೇಲಿಯಾವನ್ನು ಇದೇ (ಮೊಟೆರಾ) ಮೈದಾನದಲ್ಲಿ ಎಂ.ಎಸ್.ಧೋನಿ ನಾಯಕತ್ವದ ಭಾರತ ದೂಳೀಪಟ ಮಾಡಿತ್ತು. ಆದರೆ, ಇಂದು 2023 ವಿಶ್ವಕಪ್ ಅಂತಿಮ ಘಟ್ಟದಲ್ಲಿ ನಾಯಕ ರೋಹಿತ್ ಶರ್ಮಾ ನೇತೃತ್ವದ ಟೀಂ, ಕಪ್ ಗೆಲ್ಲುವ ಮೂಲಕ ಅಂದು ಗತಿಸಿದ ಐತಿಹಾಸಿಕ ವೈಭವವನ್ನು ಮತ್ತೆ ಸಂಭ್ರಮಿಸಲು ಕಾದು ಕುಳಿತಿದೆ.
ಅಂದು ಕ್ವಾರ್ಟರ್ ಫೈನಲ್‌ನಲ್ಲಿ ಟಾಸ್ ಗೆದ್ದು ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ದುಕೊಂಡಿತ್ತು. ಅದರಂತೆ ಬ್ಯಾಟಿಂಗ್ ಮಾಡಿದ ಆಸೀಸ್ ಪರ ರಿಕಿ ಪಾಂಟಿಂಗ್ (104) ಶತಕ ಸಿಡಿಸಿದ್ದರು. ಇದರೊಂದಿಗೆ ತನ್ನ ಇನಿಂಗ್ಸ್ ಅಂತ್ಯಕ್ಕೆ 6 ವಿಕೆಟ್‌ಗೆ 260 ರನ್ ಗಳಿಸಿತ್ತು. ಈ ಗುರಿ ಬೆನ್ನಟ್ಟಿದ್ದ ಟೀಂ ಇಂಡಿಯಾಗೆ ಆರಂಭದಲ್ಲಿ ಆಸೀಸ್ ಬೌಲರ್ಸ್ ರನ್ ಗಳಿಸದಂತೆ ಒತ್ತಡ ಹೇರಿದ್ದರು. ಇದಕ್ಕೆ ಪ್ರತ್ಯುತ್ತರ ನೀಡಿದ ಸಚಿನ್ ತೆಂಡೂಲ್ಕರ್, ಗೌತಮ್ ಗಂಭೀರ್ ಅರ್ಧಶಕತ ಪೂರೈಸುವ ಮೂಲಕ ತಂಡವನ್ನು ಗೆಲುವಿನ ಸನಿಹ ಕರೆದುಕೊಂಡು ಬಂದಿದ್ದರು.
ಈ ಸಂದರ್ಭದಲ್ಲಿ ವಿಕೆಟ್ ಪಡೆದ ಆಸೀಸ್ ಬೌಲರ್ಸ್ ರನ್ ವೇಗಕ್ಕೆ ಕಡಿವಾಣ ಹಾಕಿದ್ದರು. ಅನೇಕರು ಪಂದ್ಯ ಭಾರತದ ಕೈಯಿಂದ ತಪ್ಪಿತ್ತೆಂದೇ ಅಂದುಕೊಂಡಿದ್ದರು. ಆದರೆ, ಟೂರ್ನಿಯುದ್ದಕ್ಕೂ ಆಲ್‌ರೌಂಡರ್ ಪ್ರದರ್ಶನ ತೋರಿದ್ದ ಧೋನಿ ಬದಲಿಗೆ ಯುವರಾಜ್ ಸಿಂಗ್ ತಾವೇ ಕ್ರೀಸ್ಗೆ ಬಂದಿದ್ದರು. ಅದಾಗಲೇ ಕ್ಯಾನ್ಸರ್ ನೋವಿನಿಂದ ಯುವಿ ಬಳಲುತ್ತಿದ್ದರು. ಇದಕ್ಕೆ ತಲೆಬಾಗದೆ ಆಸೀಸ್ ಬೌಲರ್ಸ್ ಬೆವರಿಳಿಸಿದ ಯುವಿ (57*) ಅರ್ಧ ಶತಕ ಗಳಿಸಿ ತಂಡ ಗೆಲುವಿನ ದಡ ಕಾಣಲು ಪ್ರಮುಖ ಪಾತ್ರವಹಿಸಿದ್ದರು. ಸುರೇಶ್ ರೈನಾ ಕೂಡ ತಂಡಕ್ಕೆ ಬ್ಯಾಟಿಂಗ್ನಲ್ಲಿ ಆಸರೆಯಾಗಿದ್ದರು. ಯುವಿ ಮತ್ತು ರೈನಾ ಜೋಡಿ 74 ರನ್ ಜೊತೆಯಾಟವಾಡಿತ್ತು. ಮುಂದೆ ಸೆಮೀಸ್ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಗೆದ್ದಿತ್ತು. ಬಳಿಕ ನಡೆದಿದ್ದು ಇತಿಹಾಸ.
2011ರ ಭಾರತ ತಂಡಕ್ಕೂ ಇಂದಿನ 2023ರ ತಂಡಕ್ಕೂ ಸಾಕಷ್ಟು ವ್ಯತ್ಯಾಸಗಳಿವೆ. ಅಲ್ಲದೆ, ಆಟಗಾರರ ಕೌಶಲ್ಯ ಕೂಡ ಇಂದು ಉತ್ತಮ ರೀತಿಯಲ್ಲಿದೆ ಎಂಬುದು ಈಗಾಗಲೇ ಸಾಬೀತಾಗಿದೆ. ಚೆನ್ನೈನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಉದ್ಘಾಟನಾ ಲೀಗ್ ಪಂದ್ಯದಲ್ಲಿ ಭಾರತ ಗೆದ್ದಿದೆ. ಆದರೆ, ಮಿಚೆಲ್ ಸ್ಟಾರ್ಕ್ ಮತ್ತು ಜೋಶ್ ಹೆಜಲ್ವುಡ್ ಬೌಲಿಂಗ್ ದಾಳಿಗೆ ಭಾರತದ ಆರಂಭಿಕರು ಒಂದಂಕಿ ಸ್ಕೋರ್ಗೆ ವಿಕೆಟ್ ಒಪ್ಪಿಸಿ ತಂಡ ತೀವ್ರ ಸಂಕಷ್ಟದಲ್ಲಿ ಸಿಲುಕುವಂತಾಗಿತ್ತು. ಇಂತಹ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಮತ್ತು ಕೆ.ಎಲ್.ರಾಹುಲ್ ತಾಳ್ಮೆಯುತ ಆಟವಾಡಿ ಗೆಲುವಿಗೆ ಕೈ ಜೋಡಿಸಿದ್ದರು. ಈ ಇಬ್ಬರ ಆಟ ನಿಜಕ್ಕೂ ಅಂದಿನ ಯುವಿ ಮತ್ತು ರೈನಾ ಜೊತೆಯಾಟ ನೆನಪಿಸಿತ್ತು.
ಎರಡು ತಂಡಗಳಲ್ಲಿ 2011ರ ವಿಶ್ವಕಪ್ನಲ್ಲಿ ಕಾಣಿಸಿಕೊಂಡ ಮೂರು ಮಂದಿ ಆಟಗಾರರು ಇದ್ದಾರೆ. ಆಸ್ಟ್ರೇಲಿಯಾ ತಂಡದಲ್ಲಿ ಬ್ಯಾಟರ್ ಸ್ಟೀವ್ ಸ್ಮಿತ್ ಮತ್ತು ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಹಾಗು ಆಲ್‌ರೌಂಡರ್ ರವಿಚಂದ್ರನ್ ಆಶ್ವಿನ್ ಭಾರತ ತಂಡದಲ್ಲಿ ಉಳಿದಿದ್ದಾರೆ.
ಇದನ್ನೂ ಓದಿ: ವಿಶ್ವಕಪ್ ಫೈನಲ್: ಅಹಮದಾಬಾದ್‌ನಲ್ಲಿ ಹೋಟೆಲ್ ಕೊಠಡಿ ಬೆಲೆ ₹2 ಲಕ್ಷ, ವಿಮಾನ ದರ ಶೇ.300ರಷ್ಟು ಹೆಚ್ಚಳ!